ನ್ಯೂಯಾರ್ಕ್/ವಾಷಿಂಗ್ಟನ್,ಮಾ.11– ಇಂಡೋ ಪೆಸಿಫಿಕ್‌ಗೆ ಬಹುರಾಷ್ಟ್ರೀಯ ಪ್ರವಾಸ ಕೈಗೊಂಡಿರುವ ಅಮೆರಿಕದ ರಾಷ್ಟ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರು ತಾವು ಭಾರತಕ್ಕೂ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ನಾನು ಇಂಡೋ ಪೆಸಿಫಿಕ್ ಪ್ರಾಂತ್ಯಕ್ಕೆ ಬಹುರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದೇನೆ. ಪೆಸಿಫಿಕ್ ಮಗುವಾಗಿ ಬೆಳೆದಿರುವ ನಾನು ಈ ಪ್ರದೇಶವನ್ನು ಚೆನ್ನಾಗಿ ಬಲ್ಲೆ, ಜಪಾನ್, ಥಾಯ್ಲೆಂಡ್ ಮತ್ತು ಭಾರತಕ್ಕೆ ತೆರಳಲಿರುವ ನಾನು ವಾಷಿಂಗ್ಟನ್ ಡಿಸಿಗೆ ಹಿಂದಿರುಗುವ ಹಾದಿಯಲ್ಲಿ ಫ್ರಾನ್ಸ್‌ಗೆ ಸಂಕ್ಷಿಪ್ತ ಭೇಟಿ ನೀಡಲಿದ್ದೇನೆ ಎಂದು ಗಬ್ಬಾರ್ಡ್ ಅವರು ವಿಮಾನ ಏರುತ್ತಿರುವ ಚಿತ್ರದ ಸಹಿತ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಸದೃಢ ಸಂಬಂಧಗಳು, ತಿಳಿವಳಿಕೆ ಮತ್ತು ಸಂಪರ್ಕದ ಮುಕ್ತ ಮಾರ್ಗಗಳನ್ನು ಸ್ಥಾಪಿಸುವುದು ಶಾಂತಿ, ಸ್ವಾತಂತ್ರ್ಯ ಮತ್ತು ಸಮೃದ್ಧಿ ಸಾಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನದ ಭಾಗವಾಗಿ ನಾನು ಈ ಪ್ರವಾಸ ಕೈಗೊಂಡಿದ್ದೇನೆ ಎಂದು ಗಬ್ಬಾರ್ಡ್ ಹೇಳಿದ್ದಾರೆ. ತುಳಸಿ ಅವರು ಮೊದಲನೆಯದಾಗಿ ಹೊನಲುಲುವಿನಲ್ಲಿ ಬಂದಿಳಿಯಲಿದ್ದಾರೆ.
ಅಲ್ಲಿ ಅವರು ಐಸಿ ಸಹಭಾಗಿಗಳು ಮತ್ತು ಇಂಡೋ ಪಾಕಾರ (ಯುಎಸ್ ಇಂಡೋ ಪೆಸಿಫಿಕ್ ಕಮ್ಯಾಂಡ್) ಧುರೀಣರನ್ನು ಮತ್ತು ತರಬೇತಿ ನಿರತರಾಗಿರುವ ಅವರ ಪಡೆಗಳನ್ನು ಭೇಟಿಯಾಗಲಿದ್ದಾರೆ. ಸೆನೆಟ್ ದೃಢೀಕರಿಸಿದ ಮತ್ತು ಮೊದಲ ಮಹಿಳಾ ಹಿರಿಯ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ ನೇಮಕಗೊಂಡ ಬಳಿಕ ಇದು ತುಳಸಿ ಅವರ ಪ್ರಥಮ ಭಾರತ ಭೇಟಿಯಾಗಿದೆ.
ತುಳಸಿ ಅವರು ಈ ಮುನ್ನ ಟ್ರಂಪ್ ರೊಂದಿಗೆ ದ್ವಿಪಕ್ಷೀಯ ಮಾತುಕತೆಗಾಗಿ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫೆಬ್ರವರಿಯಲ್ಲಿ ಶ್ವೇತಭವನದಲ್ಲಿ ಭೇಟಿಯಾಗಿದ್ದರು. ಫೆಬ್ರವರಿ 12 ರಂದು ಭಾರತೀಯ ನೇತಾರ ಅಮೆರಿಕ ರಾಜಧಾನಿಗೆ ಬಂದಿಳಿದ ಕೂಡಲೇ ಅವರನ್ನು ಭೇಟಿಯಾದ ಮೊದಲ ಅಮೆರಿಕದ ಅಧಿಕಾರಿ ಗಬ್ಬಾರ್ಡ್ ಅವರಾಗಿದ್ದರು.