ಬೆಂಗಳೂರು, ಮಾ.11– ಕಟ್ಟಡ ನಿರ್ಮಾಣ ಮಾಡುವವರು ಮತ್ತಿತರರಿಗೆ ತೊಂದರೆಯಾಗದಂತೆ ಜಿಲ್ಲಾ ಸಮಿತಿಗಳ ಮೂಲಕ ಮರುಳುಗಾರಿಕೆಯನ್ನು ಪೂರೈಕೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿಧಾನಪರಿಷತ್‌ಗೆ ತಿಳಿಸಿದರು.
ಸದಸ್ಯ ಐವಾನ್ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾ ಸಮಿತಿಗಳ ಮೂಲಕ ಮರಳನ್ನು ಅಗತ್ಯ ಇರುವವರಿಗೆ ಪೂರೈಕೆ ಮಾಡಲು ಸೂಚನೆ ಕೊಡಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದರೆ ಸಮಸ್ಯೆಯನ್ನು ಇತ್ಯರ್ಥಪಡಿಸುವ ಆಶ್ವಾಸನೆ ನೀಡಿದರು.
ಜಿಲ್ಲಾಡಳಿತಕ್ಕೆ ಕೆಡಿಪಿ ಮೀಟಿಂಗ್ ಮೂಲಕ ಮರಳನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಹೆಚ್ಚಿನ ಅವಕಾಶ ಕೊಡಲಾಗಿದೆ. ಎಲ್ಲಿಯೂ ಕೊರತೆ ಉಂಟಾಗದಂತೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಐವಾನ್ ಡಿಸೋಜ ಅವರು, ಕರಾವಳಿಯಲ್ಲಿ ನೂರಾರು ಎಕರೆ ಮರಳುಗಾರಿಕೆಯಿಂದ ಜಮೀನು ನಾಶವಾಗುತ್ತಿದೆ. ಸಾಂಪ್ರದಾಯಿಕ ಮರಳುಗಾರಿಕೆಗೆ ಸಿರ್‌ಜೆಡ್ ವ್ಯಾಪ್ತಿಯಲ್ಲಿ ನಿಷೇಧವಿದೆ. ಆದರೂ ಕೂಡ ನಿಷೇಧಿತ ಪ್ರದೇಶದಲ್ಲಿ ಮರಳುಗಾರಿಕೆ ನಡೆಯುತ್ತಿದೆ ಎಂದರು.
ಸ್ಯಾಂಡ್ ಬಝಾರ್ ಎಂದು ಹಿಂದೆ ಮಾಡಿ ಮರಳುಗಾರಿಕೆಗೆ ವ್ಯವಸ್ಥೆ ತಂದಿದ್ದರು. ಆ ವ್ಯವಸ್ಥೆಯನ್ನು ಮುಚ್ಚಿಯೇ ಬಿಟ್ಟಿದ್ದಾರೆ. ಮರಳುಗಾರಿಕೆಗೆ ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಅವಕಾಶ ನೀಡಬೇಕಾಗುತ್ತದೆ. ಕರಾವಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಿ ಎಂದು ಐವಾನ್ ಡಿಸೋಜ ಆಗ್ರಹಿಸಿದರು.