Thursday, March 13, 2025
Homeರಾಜ್ಯವಿಧಾನಸಭೆಯಲ್ಲಿ ಗ್ಯಾರಂಟಿ ಗದ್ದಲ, ಆಡಳಿತ-ಪ್ರತಿಪಕ್ಷಗಳ ನಡುವೆ ವಾಕ್ಸಮರ

ವಿಧಾನಸಭೆಯಲ್ಲಿ ಗ್ಯಾರಂಟಿ ಗದ್ದಲ, ಆಡಳಿತ-ಪ್ರತಿಪಕ್ಷಗಳ ನಡುವೆ ವಾಕ್ಸಮರ

Congress workers appointed to implementation committees of guarantee schemes

ಬೆಂಗಳೂರು,ಮಾ.11- ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್‌‍ ಕಾರ್ಯಕರ್ತರನ್ನು ನೇಮಕ ಮಾಡಿರುವುದನ್ನು ರದ್ದುಪಡಿಸುವಂತೆ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್‌‍ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಧರಣಿ ನಡೆಸಿದ್ದರಿಂದ ಕಾವೇರಿದ ದನಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ಆರೋಪ, ಪ್ರತ್ಯಾರೋಪ ನಡೆದು ವಿಧಾನಸಭೆಯಲ್ಲಿಂದು ಕೋಲಾಹಲ ಸೃಷ್ಟಿಯಾಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌‍ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ನೀಡಿದ ಉತ್ತರದಿಂದ ತೀವ್ರ ಅಸಮಾಧಾನಗೊಂಡ ಜೆಡಿಎಸ್‌‍ ಮತ್ತು ಬಿಜೆಪಿ ಶಾಸಕರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದರಿಂದ ಸದನದಲ್ಲಿ ಮಾತಿನ ಚಕಮಕಿ ಏರಿದ ದನಿಯಲ್ಲಿ ನಡೆದು ಸದನ ಗದ್ದಲದ ಗೂಡಾಯಿತು.ಸರ್ಕಾರದ ಪರವಾಗಿ ನೀಡಿದ ಸಮಜಾಯಿಷಿಯಿಂದ ತೃಪ್ತಿಗೊಳ್ಳದ ಬಿಜೆಪಿ, ಜೆಡಿಎಸ್‌‍ ಸದಸ್ಯರು ಧರಣಿ ನಡೆಸಲು ಮುಂದಾದರು. ಅಷ್ಟರಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್‌ರವರು ಸದನದ ಕಲಾಪವನ್ನು 10 ನಿಮಿಷ ಮುಂದೂಡಿದರು.
ಮುಖ್ಯಮಂತ್ರಿ ಪರವಾಗಿ ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯೋಜನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಗೌರವ ಧನ ಮತ್ತು ಸಭಾಭತ್ಯೆ ನಿಗದಿಪಡಿಸಿ ಆದೇಶಿಸಲಾಗಿದೆ ಎಂದರು.

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಿಗೆ 40 ಸಾವಿರ, ಉಪಾಧ್ಯಕ್ಷರಿಗೆ 10 ಸಾವಿರ ಗೌರವ ಧನ ಹಾಗೂ ಸದಸ್ಯರಿಗೆ 1,100 ರೂ. ಸಭಾಭತ್ಯೆ ನೀಡಲಾಗುತ್ತಿದೆ ಎಂದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಿಗೆ 25 ಸಾವಿರ ಗೌರವಧನ, ಸದಸ್ಯರಿಗೆ ಪ್ರತಿ ಸಭೆಗೆ 1000 ರೂ. ಸಭಾಭತ್ಯೆ ನೀಡಲಾಗುತ್ತಿದೆ ಎಂದು ಹೇಳಿದರು.ಇದಕ್ಕೂ ಮುನ್ನ ಪ್ರಶ್ನೆ ಕೇಳಿದ ಎಂ.ಟಿ.ಕೃಷ್ಣಪ್ಪ, ರಾಜ್ಯಸರ್ಕಾರದ ಹಣವನ್ನು ಕಾಂಗ್ರೆಸ್‌‍ ಕಾರ್ಯಕರ್ತರಿಗೆ ಹಂಚಿಕೆ ಮಾಡಲು ಅವಕಾಶವಿದೆಯೇ?, ಅವರಿಗೆ ಕಾನೂನು ಬಾಹಿರವಾಗಿ ಸಂಬಳ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪರಿಶೀಲನೆಗೆ ಅಧಿಕಾರಿಗಳು, ಶಾಸಕರು ಇಲ್ಲವೇ? ಎಂದು ಪ್ರಶ್ನಿಸಿದರು.

2.50 ಲಕ್ಷ ವಿವಿಧ ಇಲಾಖೆಗಳ ಹುದ್ದೆಗಳು ರಾಜ್ಯದಲ್ಲಿ ಖಾಲಿ ಇವೆ. ಅವುಗಳನ್ನೂ ಕಾಂಗ್ರೆಸ್‌‍ ಕಾರ್ಯಕರ್ತರಿಗೆ ನೀಡಿಬಿಡಿ, ನೇಮಕಾತಿ ನಿಯಮಾವಳಿಗಳು ಏಕೆ ಬೇಕು?, ಕೆಪಿಎಸ್‌‍ಸಿಯನ್ನು ಮುಚ್ಚಿಬಿಡಿ ಎಂದು ಆಕ್ರೋಶಭರಿತರಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಇದಕ್ಕೆ ದನಿಗೂಡಿಸಿದ ಬಿಜೆಪಿ ಶಾಸಕ ವಿ.ಸುನಿಲ್‌ಕುಮಾರ್‌, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಒಂದು ರೂಪಾಯಿ ಹೆಚ್ಚಳ ಮಾಡಿ ಎಂದರೆ ಹಿಂದೆ ಮುಂದೆ ನೋಡುತ್ತೀರಿ. ಆದರೆ ಕಾಂಗ್ರೆಸ್‌‍ ಕಾರ್ಯಕರ್ತರಿಗೆ ಧಾರಾಳವಾಗಿ ನೀಡುತ್ತಿದ್ದೀರಿ, ಆಶ್ರಯ ಸಮಿತಿ ಸೇರಿದಂತೆ ಬೇರ್ಯಾವುದೇ ಸಮಿತಿಗೆ ಸಂಬಳ ನೀಡುತ್ತಿಲ್ಲ. ಅನುಷ್ಠಾನ ಸಮಿತಿಗೆ ಏಕೆ ಸಂಬಳ? ಎಂದರಲ್ಲದೆ, ಎಲ್ಲಾ ಗ್ಯಾರಂಟಿ ಯೋಜನೆಗಳು ಆನ್‌ಲೈನ್‌ ಮೂಲಕ ಫಲಾನುಭವಿಗಳಿಗೆ ತಲುಪುತ್ತಿರುವಾಗ ಕಾಂಗ್ರೆಸ್‌‍ ಕಾರ್ಯಕರ್ತರಿಗೆ ಏಕೆ ಹಣ ನೀಡಬೇಕು? ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ವಿರೋಧಪಕ್ಷದ ಆರ್‌.ಅಶೋಕ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಸರ್ಕಾರಕ್ಕೂ, ಕಾಂಗ್ರೆಸ್‌‍ಗೂ ವ್ಯತ್ಯಾಸವಿಲ್ಲದಂತಾಗಿದೆ. 180 ಕೋಟಿ ರೂ. ತೆಗೆದುಕೊಂಡು ಹೋಗಿ ಬಳ್ಳಾರಿಯಲ್ಲಿ ಹಂಚಿದ್ದಾರೆ. ಯಾವ ಲೆಕ್ಕದಲ್ಲಿ ರಾಜ್ಯದ ಜನರ ತೆರಿಗೆ ಹಣವನ್ನು ಕಾಂಗ್ರೆಸ್‌‍ ಕಾರ್ಯಕರ್ತರಿಗೆ ಕೊಡುತ್ತಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡರು.


ಕಾಂಗ್ರೆಸ್‌‍ನಲ್ಲಿ ದುಡ್ಡಿಲ್ಲ ಎಂದರೆ ರಸ್ತೆರಸ್ತೆಯಲ್ಲಿ ಭಿಕ್ಷೆ ಬೇಡಿ ಕೊಡಲಿ. ಸಮಿತಿಗೆ ನೇಮಕ ಮಾಡಲು ವಿದ್ಯಾರ್ಹತೆ ಏನು?, ಕಾಂಗ್ರೆಸ್‌‍ ಪಕ್ಷದಿಂದ ಕೊಡಲಿ, ಎಲ್ಲವೂ ಆನ್‌ಲೈನ್‌ ಮೂಲಕ ಸಂದಾಯವಾಗುತ್ತಿರುವಾಗ ತೆರಿಗೆ ಹಣವನ್ನು ಏಕೆ ಕೊಡಬೇಕು ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.ಇದಕ್ಕೆ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು ಸೇರಿದಂತೆ ಜೆಡಿಎಸ್‌‍, ಬಿಜೆಪಿ ಶಾಸಕರು ಎದ್ದುನಿಂತು ಸರ್ಕಾರದ ವಿರುದ್ಧ ಮಾತನಾಡಲು ಮುಂದಾದರು.ಪ್ರತಿಯಾಗಿ ಆಡಳಿತ ಪಕ್ಷದ ಶಾಸಕರು ಎದ್ದುನಿಂತು ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲ, ಗೊಂದಲದ ವಾತಾವರಣ ನಿರ್ಮಾಣವಾಯಿತು.


ಸಭಾಧ್ಯಕ್ಷರು ಸರ್ಕಾರ ಉತ್ತರ ಕೊಡಲಿದೆ. ಅದನ್ನು ಆಲಿಸಿ ಎಂದು ಪದೇಪದೇ ಹೇಳಿದರೂ ಕೇಳಲಿಲ್ಲ. ಏಕೆ ರಾಜಕೀಯ ಭಾಷಣ ಮಾಡುತ್ತೀರಿ, ಸರ್ಕಾರ ಉತ್ತರ ಕೊಡಲಿ ಸುಮನಿರಿ ಎಂದಾಗ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಇದು ಪ್ರಶ್ನೋತ್ತರದ ಅವಧಿ, ಭಾಷಣದ ಅವಧಿಯಲ್ಲ, ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.ಆಗ ಕೆರಳಿದ ಬಿಜೆಪಿ ಶಾಸಕ ಸುನಿಲ್‌ಕುಮಾರ್‌, ಸರ್ಕಾರದ ಹಣದಲ್ಲಿ ಕಾಂಗ್ರೆಸ್‌‍ನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ನೀವು ಬಜೆಟ್‌ ಮೇಲೆ ಚರ್ಚೆ ಮಾಡಿ, ಉತ್ತರ ಕೊಡುತ್ತೇವೆ. ಪಕ್ಷವನ್ನು ಅಧಿಕಾರಕ್ಕೆ ತಂದ ಕಾರ್ಯಕರ್ತರಿಗೆ ಹಕ್ಕಿದೆ. ಸರ್ಕಾರ ಉತ್ತರ ಕೊಡುತ್ತಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ನೀಡುತ್ತಿರುವ ಗೌರವಧನ ಹಾಗೂ ಸಭಾಭತ್ಯೆಯನ್ನು ನೀಡುತ್ತಿರುವುದನ್ನು ಸಮರ್ಥಿಸಿಕೊಳ್ಳಲು ಮುಂದಾದರು.ಆಗ ಮತ್ತಷ್ಟು ಆಕ್ರೋಶ ಹೊರಹಾಕಿದ ಜೆಡಿಎಸ್‌‍-ಬಿಜೆಪಿ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗೆ ಇಳಿದು ಧರಣಿ ನಡೆಸಲು ಮುಂದಾದರು. ಆಗ ಪರಿಸ್ಥಿತಿ ಕೈಮೀರುವುದನ್ನು ಅರಿತ ಸಭಾಧ್ಯಕ್ಷರು ಸದನದ ಕಾರ್ಯಕಲಾಪವನ್ನು 10 ನಿಮಿಷ ಮುಂದೂಡಿದರು.


ಮತ್ತೆ ಸದನ ಸಮಾವೇಶಗೊಂಡಾಗ ಅದೇ ವಿಚಾರ ಪ್ರಸ್ತಾಪವಾಗಿ ಶಾಸಕ ಕೃಷ್ಣಪ್ಪ ಮಾತನಾಡಿ, ಕಾನೂನು ಬಾಹಿರವಾಗಿ ಸರ್ಕಾರದ ಹಣವನ್ನು ಕಾಂಗ್ರೆಸ್‌‍ ಕಾರ್ಯಕರ್ತರಿಗೆ ಕೊಡಲು ಬರುವುದಿಲ್ಲ. ಶಾಸಕರನ್ನು ಕಡೆಗಣಿಸಿ ಕಾರ್ಯಕರ್ತರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ಸರಿಯಲ್ಲ. ಡಿಬಿಟಿ ಮೂಲಕ ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗುವಾಗ ಕಾರ್ಯಕರ್ತರಿಗೆ ಏನು ಕೆಲಸ?, ಪಕ್ಷದಿಂದ ಕೊಟ್ಟರೆ ನಮ ತಕರಾರಿಲ್ಲ ಎಂದರು.

ಬಿಜೆಪಿ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ರಾಜಕೀಯ ರಹಿತವಾಗಿ ಯೋಚನೆ ಮಾಡಬೇಕು. ಶಾಸಕರ ಎದುರುಗಡೆ ಕಾರ್ಯಕರ್ತರು ಸಭೆ ಮಾಡುತ್ತಾರೆ ಎಂದರೆ ಹೇಗೆ? ನಾವು ಜನರಿಂದ ಆಯ್ಕೆಯಾಗಿದ್ದೇವೆ. ಶಾಸಕರಿಂದ ಇನ್ನೊಂದು ಸಮಿತಿ ರಚನೆ ಮಾಡಿರುವುದು ಸರಿಯಲ್ಲ. ವಾರ್ಷಿಕ 15 ಕೋಟಿ ಹಂಚುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿರೋಧಪಕ್ಷದ ಉಪನಾಯಕ ಅರವಿಂದ್‌ ಬೆಲ್ಲದ್‌, ವಿ.ಸುನೀಲ್‌ಕುಮಾರ್‌ ಗ್ಯಾರಂಟಿ ಯೋಜನೆಗಳಿಗೆ ವಿರೋಧವಿಲ್ಲ, ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಶಾಸಕರ ಬದಲಾಗಿ ಕಾರ್ಯಕರ್ತರನ್ನು ನೇಮಕ ಮಾಡಿರುವುದಕ್ಕೆ ವಿರೋಧವಿದೆ ಎಂದರು.

ವಿರೋಧಪಕ್ಷದ ನಾಯಕ ಆರ್‌.ಅಶೋಕ ಮಾತನಾಡಿ, ಉಪಮುಖ್ಯಮಂತ್ರಿಗಳು ಗ್ಯಾರಂಟಿ ಗುಂಗಿನಿಂದ ಹೊರಬಂದಿಲ್ಲ. ದೆಹಲಿಯಲ್ಲಿ 25 ಗ್ಯಾರಂಟಿ ಕೊಟ್ಟ ಮನುಷ್ಯ ಈಗ ಜೀರೋ ಆಗಿದ್ದಾರೆ. ಐದಲ್ಲ, ಐವತ್ತು ಗ್ಯಾರಂಟಿ ಕೊಡಿ. ಆದರೆ ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ಗ್ಯಾರಂಟಿ ಯೋಜೆನೆಗೆ ಹಣ ಹೊಂದಾಣಿಕೆ ಕಷ್ಟ ಎಂದು ಹೇಳಿದ್ದಾರೆ ಎಂದಾಗ ಕಾಂಗ್ರೆಸ್‌‍ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಆಗ ಪ್ರತಿಯಾಗಿ ಬಿಜೆಪಿ ಶಾಸಕರು ಮಾತನಾಡಲು ಮುಂದಾದಾಗ ಸದನ ಗದ್ದಲ, ಗೊಂದಲದ ಗೂಡಾಯಿತು.ದೇಶದಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗಿಂತ ಗ್ಯಾರಂಟಿಗೆ ಚರ್ಚೆಯಾಗಬೇಕು ಎಂದು ರೇವಂತರೆಡ್ಡಿ ಹೇಳಿದ್ದಾರೆ ಎಂದು ಅಶೋಕ ಹೇಳುತ್ತಿದ್ದಂತೆ, ಸಚಿವ ಪ್ರಿಯಾಂಕ್‌ ಖರ್ಗೆಯವರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹಣವೂ ಬಂದಿಲ್ಲ. ಅದರ ಬಗ್ಗೆಯೂ ಹೇಳಿ ಎಂದು ಛೇಡಿಸಿದರು.

ಬಿಜೆಪಿ ಶಾಸಕ ಸಿ.ಸಿ.ಪಾಟೀಲ್‌ ಮಾತನಾಡಿ, ಕಾಂಗ್ರೆಸ್‌‍ ಶಾಸಕರ ಮಕ್ಕಳು, ಮಾಜಿ ಶಾಸಕರ ಮಕ್ಕಳು ಗ್ಯಾರಂಟಿ ಸಮಿತಿಯಲ್ಲಿದ್ದಾರೆ. ಅದರ ಬಗ್ಗೆಯೂ ಹೇಳಲಿ ಎಂದರು.ಒಂದು ಹಂತದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿಗಳ ನೇಮಕವನ್ನು ಸಮರ್ಥಿಸಿಕೊಳ್ಳುತ್ತಾ ಮಹಾರಾಷ್ಟ್ರದಲ್ಲಿ ಬಿಜೆಪಿ, ಆರ್‌ಎಸ್‌‍ಎಸ್‌‍ನವರನ್ನು ನೇಮಕ ಮಾಡಲಾಗಿದೆ. ಇದಕ್ಕೆ ಯಾರ ಹಣ ಕೊಡುತ್ತಾರೆ ಎಂದಾಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು.

ಹೀಗೆ ಸುದೀರ್ಘವಾಗಿ ಆರೋಪ-ಪ್ರತ್ಯಾರೋಪಗಳು ನಡೆದವು. ಗ್ಯಾರಂಟಿ ಸಮಿತಿಗಳನ್ನು ರದ್ದು ಮಾಡಿ, ಸಮಿತಿಗೆ 10 ಸದಸ್ಯರನ್ನು ಮಾಡಿ, ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿ, ಖಜಾನೆಯ ಹಣ ದುರ್ಬಳಕೆಗೆ ಅವಕಾಶ ಕೊಡಲ್ಲ ಎಂದು ಆರ್‌.ಅಶೋಕ ಹೇಳಿದರು.ಉಪಮುಖ್ಯಮಂತ್ರಿಗಳು ನೀಡಿದ ಉತ್ತರದಿಂದ ತೃಪ್ತರಾಗದ ಬಿಜೆಪಿ ಮತ್ತು ಜೆಡಿಎಸ್‌‍ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು.ಆಗ ಧರಣಿ ನಡುವೆಯೇ ಸಭಾಧ್ಯಕ್ಷರು ಮುಂದಿನ ಕಾರ್ಯಕಲಾಪಗಳನ್ನು ಕೈಗೆತ್ತಿಕೊಂಡರು.

ಈ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪದೇಪದೇ ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪ, ಮಾತಿನ ಚಕಮಕಿಗಳು ನಡೆದು ಸದನ ಗದ್ದಲ, ಗೊಂದಲದ ಗೂಡಾಯಿತು.
ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್‌‍ ಕಾರ್ಯಕರ್ತರನ್ನು ನೇಮಕ ಮಾಡಿರುವುದನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಲವಾಗಿ ಸಮರ್ಥನೆ ಮಾಡಿಕೊಂಡರೆ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್‌‍ ಕಾರ್ಯಕರ್ತರ ಬದಲಾಗಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ, ಜೆಡಿಎಸ್‌‍ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು.

RELATED ARTICLES

Latest News