ಬೆಂಗಳೂರು,ಮಾ.13- ವಿದ್ಯುತ್ ಸ್ಪರ್ಶಿಸಿ ಮಹಿಳೆ ಮೃತ ಪಟ್ಟಿರುವ ಘಟನೆ ಚಾಮರಾಜ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.ವಿನಾಯಕ ಚಿತ್ರಮಂದಿರ ಹಿಂಭಾಗದ ಆನಂದಪುರ ಮೊದಲನೇ ಕ್ರಾಸ್ ನಿವಾಸಿ ಸೆಲ್ವಿ (58) ಮೃತಪಟ್ಟ ಮಹಿಳೆ.
ಇಂದು ಬೆಳಗಿನ ಜಾವ 3.30ರ ಸುಮಾರಿನಲ್ಲಿ ಸೆಲ್ವಿ ಅವರು ಕುಡಿಯುವ ನೀರು ಹಿಡಿಯುವ ಸಲುವಾಗಿ ಮೋಟರ್ ಆನ್ ಮಾಡುತ್ತಿದ್ದಂತೆ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಅವರು ಮೃತಪಟ್ಟಿದ್ದಾರೆ.ಈ ಬಗ್ಗೆ ಚಾಮರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರತಿಭಟನೆ: ಈ ಸುದ್ದಿ ತಿಳಿಯುತ್ತಿದ್ದಂತೆ 50ರಿಂದ 60 ಮಂದಿ ಸ್ಥಳೀಯ ನಿವಾಸಿಗಳು ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಮೈಸೂರು ರಸ್ತೆಯಲ್ಲಿ ಜಮಾಯಿಸಿ ಕೆಲ ಕಾಲ ಪ್ರತಿಭಟನೆ ನಡೆಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಪಟ್ಟು ಹಿಡಿದರು. ಅಲ್ಲದೇ ಸ್ಥಳಕ್ಕೆ ಸಚಿವರು ಬರಬೇಕೆಂದು ಒತ್ತಾಯಿಸಿದರು.
ಸುದ್ದಿ ತಿಳಿದು ಸಚಿವರಾದ ಜಮೀರ್ ಅಹಮದ್ ಅವರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ತೆರಳಿದಾಗ ಪ್ರತಿಭಟನಾಕಾರರು ಸ್ಥಳದಿಂದ ಹಿಂದುರುಗಿದರು.ಈ ಸಂದರ್ಭದಲ್ಲಿ ಮೈಸೂರು ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲ ಕಾಲ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು.
ಅನಧಿಕೃತ ಸಂಪರ್ಕ: ಈ ಪ್ರದೇಶದಲ್ಲಿ ಮನೆಮನೆಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಆದ್ದರಿಂದ ಸ್ಥಳೀಯ ನಿವಾಸಿಗಳು ಕಾವೇರಿ ನೀರು ಸರಬರಾಜು ಪೈಪ್‌ನಿಂದ ಮನೆ ಮನೆಗೆ ಅಕ್ರಮವಾಗಿ ನೀರಿನ ಸಂಪರ್ಕ ಪಡೆದು ಮೋಟರ್ ಅಳವಡಿಸಿಕೊಂಡಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ. ಇನ್ನಾದರೂ ಬಿಡಬ್ಲ್ಯೂಎಸ್‌ಎಸ್‌ಬಿ ಯವರು ಈ ಬಗ್ಗೆ ಗಮನಹರಿಸುವರೇ ಎಂಬುವುದನ್ನು ಕಾದು ನೋಡಬೇಕಿದೆ.