ಮೈಸೂರು, ಮಾ14-ರೌಡಿಶೀಟರ್ ಒಬ್ಬನನ್ನು ತೋಟದ ಮನೆಯಲ್ಲಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಮೈಸೂರು ತಾಲೂಕು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹನಗಳ್ಳಿಯಲ್ಲಿ ಈ ಘಟನೆ ನಡೆದಿದ್ದು ದೊರೆಸ್ವಾಮಿ ಆರ್ ಸೂರ್ಯ ಕೊಲೆಯಾದ ರೌಡಿ ಶೀಟರ್ ಆಗಿದ್ದು ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ.
ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದ್ದು ಕಳೆದ ಮಾರ್ಚ್ 12ರ ರಾತ್ರಿ ಈ ಕೃತ್ಯ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ದೊರೆಸ್ವಾಮಿ ವಿರುದ್ದ 4 ರಿಂದ 5 ಪ್ರಕರಣಗಳಿದ್ದ ಎಂಓಬಿ ಆಗಿದ್ದಾನೆ. ಕಳೆದ 6 ತಿಂಗಳ ಹಿಂದೆ ಪತ್ನಿ ದೀಪಿಕಾ ಈತನಿಂದ
ದೂರವಾಗಿದ್ದಾಳೆ.
ಬೆಂಗಳೂರಿನ ಯುವತಿಯೊಬ್ಬಳ ಜೊತೆ ಈತ ಸಂಪರ್ಕ ಇಟ್ಟುಕೊಂಡಿದ್ದನೆಂದು ಹೇಳಲಾಗಿದೆ. ಕೆಲವು ದಿನಗಳಿಂದ ಯುವತಿಯ ಜೊತೆ ಓಡಾಡಿರುವ ಮಾಹಿತಿ ಇದೆ. ಕೊಲೆ ನಡೆದ ಹಿಂದಿನ ದಿನವೂ ಸಹ ಯುವತಿಯ ಜೊತೆ ಇದ್ದನೆಂದು ಹೇಳಲಾಗಿದೆ.
ಕೃತ್ಯ ನಡೆದ ಸ್ಥಳದಲ್ಲಿ ಹೋಟೆಲ್‌ನಿಂದ ತಂದ ಆಹಾರ ಪದಾರ್ಥಗಳು ಕಂಡು ಬಂದಿದೆ.ಕೃತ್ಯ ನಡೆದ ನಂತರ ಯುವತಿ ನಾಪತ್ತೆಯಾಗಿದ್ದಾಳೆ. ಗ್ರಾಮದ ಜನತೆ ಜೊತೆ ಈತನ ಸಂಬಂಧ ಉತ್ತಮವಾಗಿರಲಿಲ್ಲ ಎಂದು ಹೇಳಲಾಗಿದೆ. ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ಕರೀಂ ರಾವತರ್, ಜಯಪುರ ಠಾಣೆ ಎಸ್‌ಐ ಶಿವನಂಜ ಶೆಟ್ಟಿ
ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳುಮುದ್ರೆ ಘಟಕದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ.ಸಧ್ಯ ದೊರೆಸ್ವಾಮಿ ಜೊತೆಗೆ ಇದ್ದ ಯುವತಿಯ ಸುತ್ತು ಅನುಮಾನದ ಹುತ್ತ ಬೆಳೆದಿದೆ.ಯುವತಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.