ಬೆಂಗಳೂರು, ಮಾ.14-ಸಿಎಸ್‌ಆರ್ ನಿಧಿಯ ಅನುದಾನವನ್ನು ಶಾಲೆ, ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ನೀಡುವ ಕುರಿತಂತೆ ಆಲೋಚನೆ ಮಾಡಲಾ ಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂಗನವಾಡಿ ಕಟ್ಟಡಗಳಿಗೂ ಸಿಎಸ್‌ಆರ್ ಅನುದಾನ ನೀಡುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದೆ. ಸದ್ಯದಲ್ಲೇ ಈ ಸಂಬಂಧ ಮಾರ್ಗಸೂಚಿ ರೂಪಿಸಲಾಗುವುದು ಎಂದು ಹೇಳಿದರು.
ಸಿಎಸ್‌ಆರ್ ಅನುದಾನವನ್ನು ಆರೋಗ್ಯ, ಶಿಕ್ಷಣ, ಕೌಶಲ್ಯ ತರಬೇತಿ, ಪರಿಸರ ನಿಯಂತ್ರಣ, ನೀರಿನ ಸೌಕರ್ಯ ಇತ್ಯಾದಿಗಳಿಗೆ ಉಪಯೋಗಿಸಲಾಗಿದೆ. ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಕೆಐಎಡಿಬಿ ವತಿಯಿಂದ 5 ಕೈಗಾರಿಕಾ ಪೊರದೇಶಗಳನ್ನು ಅಭಿವೃದ್ಧಿಪಡಿಸಲಾಗಿದ್ದು,1181 ಕೈಗಾರಿಕೆಗಳಿವೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರದ ಕಂಪನಿ ಕಾಯ್ದೆ 2013ರ ಕಲಂ 135ರ ಮಾರ್ಗಸೂಚಿ ಅಡಿಯಲ್ಲಿ 500 ಕೋಟಿ ರೂ. ಹಾಗೂ ಹೆಚ್ಚಿನ ನಿವ್ವಳ ಮೌಲ್ಯವಿರುವ ಅಥವಾ 1000 ಕೋಟಿ ರೂ ಹಾಗೂ ಹೆಚ್ಚಿನ ವಹಿವಾಟು ಕಂಪನಿಗಳು ಸಿಎಸ್‌ಆರ್‌ನಿಧಿ ಹಣ ನೀಡಬೇಕು.
5 ಕೋಟಿ ಹಾಗೂ ಹೆಚ್ಚಿನ ನಿವ್ವಳ ಲಾಭ ಹೊಂದಿರುವ ಉದ್ಯಮಗಳು ಹಿಂದಿನ 3 ವರ್ಷಗಳ ಕನಿಷ್ಠ ಶೇ.2ರಷ್ಟು ಸರಾಸರಿ ನಿವ್ವಳ ಲಾಭಾಂಶವನ್ನು ಸಿಎಸ್‌ಆರ್ ಯೋಜನೆ, ಕಾರ್ಯಕ್ರಮಗಳಿಗೆ ಖರ್ಚು ಮಾಡಬೇಕಾಗಿರುತ್ತದೆ ಎಂದು ಅವರು ಹೇಳಿದರು.