ಹಾವೇರಿ, ಮಾ.14: ಮದುವೆಯಾಗಲು ಒಲ್ಲದ ಯುವತಿಯ ಮೇಲೆ ಹಲ್ಲೆ ನಡೆಸಿ ಕೊಂದು ತುಂಗಭದ್ರಾನದಿಗೆ ಎಸೆದ ಹಂತಕನನ್ನು ಹಲ ಗೇರಿ ಪೊಲೀಸರು ಬಂಧಿಸಿದ್ದಾರೆ. ರಟ್ಟಿಹಳ್ಳಿ ತಾಲ್ಲೂಕಿನ ಮಸೂರು ಗ್ರಾಮದ ಸ್ವಾತಿ(22) ಕೊಲೆಯಾದ ಯುವತಿಯಾಗಿದ್ದು ಹಂತಕನನ್ನು ಹಿರೆಕೇರೂರು ಹಳೇ ವೀರಾಪುರದ ನಯಾಜ್ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ನಯಾಜ್‌ಗೆ ನಿಶ್ಚಿತಾರ್ಥ ನಡೆದಿತ್ತು. ಈ ವೇಳೆ ನಯಾಜ್ ಸ್ವಾತಿ ಹಿಂದೆ ಬಿದ್ದು ನನ್ನನ್ನು ಮದುವೆಯಾಗುವಂತೆ ಪೀಡಿಸಿದ್ದ. ಆದರೆ ಅದಕ್ಕೆ ಆಕೆ ಬುದ್ದಿಮಾತು ಹೇಳಿ ನಮ್ಮ ಧರ್ಮಗಳು ಬೇರೆ, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಾಳೆ. ಆದರೂ ಆತ ಆಕೆಯನ್ನು ಬಿಡದೇ ಗೆಳತಿಯರ ಬಳಿ ಸ್ವಾತಿಯನ್ನು ಒಪ್ಪಿಸುವಂತೆ ದುಂಬಾಲು ಬಿದ್ದಿದ್ದಾನೆ.
ಕೊನೆಯದಾಗಿ ನಿನ್ನ ಜೊತೆ ಮಾತನಾಡಬೇಕೆಂದು ಕೆರೆದಿದ್ದ. ಕಳೆದ ಮಾ.3 ರಂದು ಮುಂಜಾನೆ ಬಾಡಿಗೆ ಕಾರು ಪಡೆದ ನಯಾಜ್ ರಟ್ಟಿಹಳ್ಳಿಯಿಂದ ಸ್ವಾತಿಯನ್ನು ರಾಣೆಬೆನ್ನೂರು ಹೊರವಲಯದ ಸುವರ್ಣ ಪಾರ್ಕ್‌ಗೆ ಕರೆದುಕೊಂಡು ಹೋಗಿ ನಂತರ ಆತನ ಸ್ನೇಹಿತರಾದ ದುರ್ಗಾಚಾರಿ ಮತ್ತು ವಿನಾಯಕನನ್ನು ಕರೆಸಿಕೊಂಡಿದ್ದ.
ಮತ್ತೆ ಆಕೆಯ ಬಳಿ ಮದುವೆಯಾಗುವಂತೆ ಒತ್ತಡ ಹೇರಿ ಆದರೆ ಆಕೆ ಒಲ್ಲೆ ಎಂದು ಅಲ್ಲಿಂದ ಹೊರಟಾಗ ನಯಾಜ್ ಮತ್ತು ಆತನ ಸ್ನೇಹಿ ತರು ಆಕೆಯನ್ನು ತಡೆದು ಕಬ್ಬಣಕುಂತಿಮಠ ಬಳಿ ಪಾಳುಬಿದ್ದ ಶಾಲೆಗೆ ಎಳೆದೊಯ್ದು ಹಲ್ಲೆ ನಡೆಸಿ ನಂತರ ಟವಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.
ಅದೇ ದಿನ ಕಾರು ಡಿಕ್ಕಿಯಲ್ಲಿ ಸ್ವಾತಿ ಶವ ಇಟ್ಟುಕೊಂಡು ರಾತ್ರಿ 11 ಗಂಟೆ ವೇಳೆಯಲ್ಲಿ ಕೂಸಗಟ್ಟಿನಂದಿಗುಡಿ ಗ್ರಾಮದ ಮಧ್ಯೆ ಇರುವ ತುಂಗ ಭದ್ರಾನದಿ ಸೇತುವೆ ಬಳಿ ಬಂದು ಮೇಲಿಂದ ಸ್ವಾತಿ ಶವವನ್ನು ನದಿಗೆ ಎಸೆದು ಪಾರಿಯಾಗಿದ್ದರು. ನಂತರ ಮಾ.6 ರಂದು ಪತ್ತೆಪುರ ಗ್ರಾಮದ ಹದ್ದಿ ಆಂಜನೇಯ ದೇವಸ್ಥಾನದ ನದಿ ದಂಡೆ ಮಹಿಳೆಯ ಅರೆಬರೆ ದೇಹ ಕಂಡುಬಂದಿದೆ.
ಈ ಬಗ್ಗೆ ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಾಗ ಮೃತ ಯುವತಿ ಸ್ವಾತಿ ಎಂದು ತಿಳಿದುಬಂದು,ಕೊಲೆ ಹಿಂದಿನ ಕಾರಣ ಜಾಡು ಹಿಡಿದು ಹೊರಟಾಗ ಈ ಘಟನೆ ಬೆಳಕಿಗೆ ಬಂದಿದೆ. ತಲೆಮರೆಸಿಕೊಂಡಿದ್ದ ನಯಾಜ್‌ನನ್ನು ಪತ್ತೆ ಮಾಡಿ ಬಂಧಿಸಿ ಮತ್ತಿಬ್ಬರ ಪತ್ತೆಗೆ ಬಲೆ ಬೀಸಲಾಗಿದೆ. ಹಲಗೇರಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.