ಮಂಗಳೂರು,ಮಾ.15- ಕರಾವಳಿಯ ಭಾಗದಲ್ಲಿ ಸೌಹಾರ್ದತೆಯನ್ನು ಹಾಳುಗೆಡವಲು ಪ್ರಯತ್ನಿಸುವವರನ್ನು ನಿರ್ಲಕ್ಷಿಸುವುದೇ ಸೂಕ್ತ ಮಾರ್ಗ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಾಂತಿ ನೆಮ್ಮದಿ ಸೌಹಾರ್ದತೆಯನ್ನು ಹಾಳುಗೆಡವಲು ಸಾಕಷ್ಟು ಮಂದಿ ಪದೇಪದೇ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅಂತವರನ್ನು ನಿರ್ಲಕ್ಷಿಸುವುದು ಸೂಕ್ತ ಮಾರ್ಗ. 10 ಪ್ರಕರಣ ದಾಖಲಿಸಿದರೂ ಅಂತಹ ವ್ಯಕ್ತಿಗಳು ತಮ್ಮ ಚಾಳಿಯನ್ನು ಬಿಡುವುದಿಲ್ಲ, ಅವರು ಪ್ರಚೋದನಾಕಾರಿ ಭಾಷಣ ಮಾಡಿದರೆ ಅವರ ಕಾರ್ಯಕ್ರಮದಲ್ಲಿದ್ದ ಬೆರಳೆಣಿಕೆಯ ಜನರಿಗೆ ವಿಷಯ ತಿಳಿಯುತ್ತದೆ. ಅಲ್ಲಿಗೆ ಅದು ಮುಗಿಯುತ್ತದೆ.
ಒಂದು ವೇಳೆ ಪ್ರಕರಣ ದಾಖಲಿಸಿ ಪ್ರತಿ ಟೀಕೆಗಳನ್ನು ಮಾಡಿದರೆ ವ್ಯಕ್ತಿಗಳಿಗೆ ದೊಡ್ಡ ಮಟ್ಟದ ಪ್ರಚಾರ ಸಿಗುತ್ತದೆ. ಅವರು ಆಡಿದ ಮಾತುಗಳು ದೂರದಲ್ಲಿ ಎಲ್ಲೋ ಇದ್ದ ಜನರಿಗೆ ತಲುಪುತ್ತದೆ ಎಂದು ಹೇಳಿದರು.
ಪ್ರಚೋದನಾಕಾರಿ ಭಾಷಣ ಮಾಡಿದವರ ಮಾತುಗಳನ್ನು ಇತ್ತೀಚೆಗೆ ಊರಿನ ಜನ ಕಿವಿಗೊಟ್ಟು ಕೇಳುತ್ತಿಲ್ಲ. ಎಷ್ಟೇ ಬಾಯಿ ಬಡಿದುಕೊಂಡು ಭಾಷಣ ಮಾಡಿದರೂ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಬೇಧಭಾವವಿಲ್ಲದೆ ಒಗ್ಗಟ್ಟಿನಲ್ಲಿದ್ದಾರೆ. ಹೊರಗಿನಿಂದ ಬಂದವರು ಶಾಂತಿಭಂಗ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳ ನಡೆಸಿದರು.
ಪ್ರಾಣಿ ಕಚ್ಚುತ್ತದೆ ಎಂದು ನಾವು ತಿರುಗಿಸಿ ಕಚ್ಚುವುದು ಸೂಕ್ತ ಅಲ್ಲ. ಅದನ್ನು ಅದರ ಪಾಡಿಗೆ ಬಿಟ್ಟರೆ ಯಾರಿಗೂ ಏನೂ ತೊಂದರೆಯಾಗುವುದಿಲ್ಲ, ನಿರ್ಲಕ್ಷ್ಯಕ್ಕಿಂತ ಇದಕ್ಕೆ ಒಳ್ಳೆಯ ಮದ್ದಿಲ್ಲ. ಪದೇಪದೇ ಪ್ರಚೋದನೆ ಮಾಡುವವರನ್ನು ಅವರ ಜೊತೆಯಲ್ಲಿದ್ದವರೇ ಖಂಡಿಸಿ ಬುದ್ದಿ ಹೇಳುತ್ತಿದ್ದಾರೆ ಎಂದು ಹೇಳಿದರು.
ಪ್ರಚೋದನಾಕಾರಿ ಭಾಷಣ ಮಾಡಿದವರಿಗೆ ಪ್ರತಿ ಟೀಕೆ ಮಾಡುವುದು ಜಾತ್ಯತೀತತೆಯಲ್ಲ, ಅದರ ಬದಲಿಗೆ ಜನರಲ್ಲಿ ಶಾಂತಿ ಭಂಗವಾಗದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ತೀರಾ ವಿಪರೀತವಾದರೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಅಪಾಯಕಾರಿಯಾದ ಪ್ರಚೋದನಾಕಾರಿ ಭಾಷಣ ಮಾಡಲಾಗಿತ್ತು. ಇತ್ತೀಚೆಗೆ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಬೇರೆಬೇರೆ ರೀತಿಯ ಬಣ್ಣ ಕಟ್ಟುವ ಹುನ್ನಾರ ನಡೆದಿತ್ತು. ಆದರೆ ಜನ ಅದಕ್ಕೆ ಕಿವಿಗೊಟ್ಟಿಲ್ಲ ಎಂದರು. ತಮ್ಮ ವಿರುದ್ಧ ದುಬೈನಲ್ಲಿ ಬ್ಯಾಂಕ್ ಇದೆ ಎಂಬೆಲ್ಲಾ ವದಂತಿಗಳನ್ನು ಹರಡಲಾಯಿತು. ಆದರೆ ಇದ್ಯಾವುದಕ್ಕೂ ಜನ ಕಿವಿಗೊಡಲಿಲ್ಲ. ಸತ್ಯ ಮನವರಿಕೆಯಾದ ಮೇಲೆ ತಮ್ಮ ತೀರ್ಪನ್ನು ನೀಡಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಟೀಕೆ ಮಾಡಿದವರನ್ನು ತಾವು ಗೌರವದಿಂದ ಕಾಣುತ್ತಿದ್ದು, ಯಾವುದೇ ಬೇಧಭಾವ ಮಾಡುತ್ತಿಲ್ಲ. ಇತ್ತೀಚೆಗೆ ವ್ಯಕ್ತಿಯೊಬ್ಬರು ತಮ್ಮ ಬಳಿ ಸಹಾಯ ಪಡೆದುಕೊಂಡರು. ಕೊನೆಗೆ ಅವರಿಗೆ ಪಶ್ಚತ್ತಾಪವಾಗಿ ಸಾಮಾಜಿಕ ಜಾಲತಾಣದಲ್ಲಿ ನಾವು ನಿಮ್ಮನ್ನು ವ್ಯಾಪಕವಾಗಿ ಟೀಕೆ ಮಾಡಿದ್ದೆ. ಆದರೂ ನೀವು ಸಹಾಯ ಮಾಡಿದ್ದೀರ ಎಂದು ಭಾವೋದ್ವೇಗಕ್ಕೆ ಒಳಗಾದರು. ನನಗೆ ನೀನು ಟೀಕಿಸಿರುವುದು ಗೊತ್ತಿಲ್ಲ, ಅಂತಹ ವಿಚಾರಗಳು ಗೊತ್ತಿರುವ ಅನಿವಾರ್ಯವೂ ಇಲ್ಲ ಎಂದು ಹೇಳಿ ಕಳುಹಿಸಿದ್ದಾಗಿ ಖಾದರ್ ವಿವರಿಸಿದರು.
ಅತೀ ಚಿಕ್ಕ ವಯಸ್ಸಿನಲ್ಲಿಯೇ ನನಗೆ ವಿಧಾನಸಭೆಯ ಸ್ಪೀಕರ್ ಸ್ಥಾನ ದೊರೆತಿದೆ. ಈ ರಾಜಕೀಯದಲ್ಲಿ ಎಂದಿಗೂ ನಾನು ಅಧಿಕಾರದ ಹಿಂದೆ ಹೋದವನಲ್ಲ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಜನರ ಸೇವೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಜನರ ಆಶೀರ್ವಾದ ಹಾಗೂ ದೇವರ ಕೃಪೆ ಇದ್ದರೆ ದೊಡ್ಡ ಸ್ಥಾನಮಾನ ಸಿಗಬಹುದು. ಒಂದು ವೇಳೆ ಜನರಿಗೆ ಬೇಡ ಎನಿಸಿ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದರೆ ಇಷ್ಟೇ ಸಂತೋಷದಿಂದ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.