ಬೆಂಗಳೂರು,ಮಾ.15- ದುಬೈನಿಂದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ರನ್ಯಾ ರಾವ್ ಬಂಧನದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಬ್ಬರು ಚಿನ್ನದ ವ್ಯಾಪಾರಿಗಳ ಬೆನ್ನು ಬಿದ್ದಿದ್ದು ತೀವ್ರ ವಿಚಾರಣೆ ನಡೆಸಿದ್ದಾರೆ.ವಿಮಾನನಿಲ್ದಾಣದಲ್ಲಿ ಕೇಂದ್ರ ಕಂದಾಯ ಗುಪ್ತಚರ ಇಲಾಖೆಯು ರನ್ಯಾ ಅವರನ್ನು ಬಂಧಿಸಿದ ಬಳಿಕ ಪ್ರಕರಣಕ್ಕೆ ನಾನಾ ವ್ಯಾಖ್ಯಾನಗಳು ಕೇಳಿಬಂದಿವೆ.
ಈ ಹಗರಣದಲ್ಲಿ ಟಿಎಂಎಲ್ ಕಾಯ್ದೆ ಉಲ್ಲಂಘನೆಯಾಗಿ ವಿದೇಶಿ ವಿನಿಮಯ ವಹಿವಾಟು ನಡೆದಿದೆ ಎಂಬ ಆರೋಪಗಳಿವೆ. ಹೀಗಾಗಿ ಎರಡು ದಿನಗಳ ಹಿಂದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಗರದ ಹಲವು ಕಡೆ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಚಿನ್ನದ ವ್ಯಾಪಾರಿಗಳ ಮನೆಯಲ್ಲಿ ಅನಧಿಕೃತವಾಗಿ ಚಿನ್ನ ಪತ್ತೆಯಾಗಿತ್ತು ಎಂದು ತಿಳಿದುಬಂದಿದೆ. ಇದರ ಆಧಾರದ ಮೇಲೆ ಇಬ್ಬರು ಚಿನ್ನದ ವ್ಯಾಪಾರಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಟಿ ರನ್ಯಾ ಅವರ ಜೊತೆ ಸಂಪರ್ಕದಲ್ಲಿದ್ದರು ಎಂದು ಹೇಳಲಾದ ಈ ಚಿನ್ನದ ವ್ಯಾಪಾರಿಗಳಿಗೆ ಈಗ ಸಂಕಷ್ಟ ಎದುರಾಗಿದೆ. ಅನಧಿಕೃತ ಚಿನ್ನದ ಮೂಲ ಕುರಿತು ಉತ್ತರ ನೀಡಲು ವ್ಯಾಪಾರಿಗಳು ತಡಕಾಡುತ್ತಿದ್ದಾರೆ ಎನ್ನಲಾಗಿದೆ.
ಚಿನ್ನದ ವಹಿವಾಟು ಕುರಿತು ಒಂದೆಡೆ ಸಿಬಿಐ, ಮತ್ತೊಂದೆಡೆ ಡಿಆರ್‌ಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಹಣದ ವಹಿವಾಟು ಇರುವ ಬಗ್ಗೆ ಶಂಕೆ ಕೂಡ ವ್ಯಕ್ತವಾಗಿದೆ. ಒಂದೆಡೆ ಆ ಬಗ್ಗೆಯೂ ತನಿಖೆಯಾಗುತ್ತಿದ್ದು, ದುಬೈ ಹಾಗೂ ಇತರ ದೇಶಗಳಿಂದ ಕಳ್ಳ ಮಾರ್ಗದಲ್ಲಿ ತಂದ ಚಿನ್ನದ ಪರಭಾರೆಯ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಗೌರವ್‌ಗುಪ್ತ ನೇತೃತ್ವದಲ್ಲಿ ವಿಮಾನನಿಲ್ದಾಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ತಪಾಸಣೆ ತಪ್ಪಿಸಿಕೊಳ್ಳುವ ಮೂಲಕ ಚಿನ್ನ ಕಳ್ಳ ಸಾಗಾಣಿಕೆ ಮಾಡಿದ ಕುರಿತು ವಿಚಾರಣೆ ನಡೆಯುತ್ತಿದೆ. ಕ್ರಿಮಿನಲ್ ಅಪರಾಧಗಳ ಬಗ್ಗೆ ವ್ಯಾಪಕ ತನಿಖೆಗಳು ನಡೆಯುತ್ತಿವೆ.