Saturday, March 15, 2025
Homeರಾಷ್ಟ್ರೀಯ | Nationalಸೈಬರ್‌ ಅಪರಾಧಗಳ ನಿಯಂತ್ರಣಕ್ಕೆ ಪ್ರತ್ಯೇಕ ಸಂಸ್ಥೆ : ಗೃಹಸಚಿವ ಪರಮೇಶ್ವರ್‌

ಸೈಬರ್‌ ಅಪರಾಧಗಳ ನಿಯಂತ್ರಣಕ್ಕೆ ಪ್ರತ್ಯೇಕ ಸಂಸ್ಥೆ : ಗೃಹಸಚಿವ ಪರಮೇಶ್ವರ್‌

Separate organization to control cyber crimes: Home Minister Parameshwar

ಬೆಂಗಳೂರು,ಮಾ.15– ಸೈಬರ್‌ ಅಪರಾಧಗಳ ನಿಯಂತ್ರ ಣಕ್ಕೆ ಅಹಮದಾಬಾದ್‌ನ ಕೇಂದ್ರೀಯ ವಿಶ್ವ ವಿದ್ಯಾಲಯ ಮಾದರಿಯಲ್ಲಿ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ನಗರದಲ್ಲಿಂದು ಸಿಐಡಿ ಡಿ ಕೋಡ್‌ 2025 ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತು ವಿಸ್ತರಣೆಯಾಗುತ್ತಿದೆ. ತಂತ್ರಜ್ಞಾನದ ಬೆಳವಣಿಗೆ ಭೌಗೋಳಿಕ ಮಿತಿಗಳನ್ನು ತೆಗೆದುಹಾಕಿದೆ. ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅದರ ಭದ್ರತೆಯ ಸವಾಲುಗಳು ಕೂಡ ಉದ್ಭವಿಸುತ್ತಿವೆ. ಅವುಗಳನ್ನು ಕಾಲಕಾಲಕ್ಕೆ ಮನವರಿಕೆ ಮಾಡಿಕೊಂಡು ನಿಭಾಯಿಸುವ ಕೌಶಲ್ಯವನ್ನು ಪೊಲೀಸರು ರೂಢಿಸಿಕೊಳ್ಳಬೇಕು ಎಂದರು.

ಕರ್ನಾಟಕ ಮಾಹಿತಿ ತಂತ್ರಜ್ಞಾನದ ಜೊತೆಗೆ ಸೈಬರ್‌ ಅಪರಾಧಗಳ ನಿಯಂತ್ರಣ ವಿಷಯದಲ್ಲೂ ಮುಂಚೂಣಿಯಲ್ಲಿದೆ. ವಿಧಾನಸಭೆಯಲ್ಲಿ ಸುಮಾರು 6ಕ್ಕಿಂತಲೂ ಹೆಚ್ಚಿನ ಪ್ರಶ್ನೆಗಳು ಸೈಬರ್‌ ಅಪರಾಧ ಕುರಿತಂತೆ ಕೇಳಿಬಂದಿವೆ. ನಾನು ಅವುಗಳಿಗೆ ಉತ್ತರ ನೀಡಿದ್ದೇನೆ ಎಂದು ಹೇಳಿದರು.
ಮುಂದಿನ ಸಮಾವೇಶ ಭವಿಷ್ಯದ ಸವಾಲುಗಳನ್ನು ನಿಭಾಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಇನ್ಫೋಸಿಸ್‌‍ ಜೊತೆ ಒಪ್ಪಂದ ಮಾಡಿಕೊಂಡು ಸೈಬರ್‌ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿತ್ತು. ಇನ್ಫೋಸಿಸ್‌‍ ಸುಧಾಮೂರ್ತಿಯವರು 20 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದ್ದರು.

ರಾಜ್ಯದಲ್ಲಿ 45 ಸಾವಿರ ಜನರಿಗೆ ಸೈಬರ್‌ ಅಪರಾಧಗಳ ಬಗ್ಗೆ ತರಬೇತಿ ನೀಡಲಾಗಿದೆ. ಇದರಲ್ಲಿ ಪೊಲೀಸರಷ್ಟೇ ಅಲ್ಲ ನ್ಯಾಯಾಂಗ ಮತ್ತು ಅಭಿಯೋಜನೆ ಇಲಾಖೆಯವರಿಗೂ ಕೂಡ ತರಬೇತಿ ನೀಡುವುದಾಗಿ ತಿಳಿಸಿದರು.

ಶೈಕ್ಷಣಿಕ ವಲಯದಲ್ಲೂ ವಿಶ್ವ ವಿದ್ಯಾಲಯಗಳು ಸೈಬರ್‌ ಸವಾಲುಗಳು ಮತ್ತು ಸುರಕ್ಷತೆ ಬಗ್ಗೆ ಪಠ್ಯಕ್ರಮಗಳನ್ನು ರೂಪಿಸಿ ಬೋಧನೆ ಮಾಡುತ್ತಿವೆ. ಕರ್ನಾಟಕ ಸರ್ಕಾರ 54 ಸೈಬರ್‌ ಪೊಲೀಸ್‌‍ ಠಾಣೆಗಳನ್ನು ಆರಂಭಿಸಲಾಗಿದೆ. 103 ಕೋಟಿ ರೂ.ಗಳನ್ನು ಈ ವಲಯಕ್ಕಾಗಿ ಖರ್ಚು ಮಾಡಲಾಗಿದೆ ಎಂದರು.

ಅಹಮದಾಬಾದ್‌ನ ಕೇಂದ್ರೀಯ ಸೈಬರ್‌ ವಿಶ್ವವಿದ್ಯಾಲಯಕ್ಕೆ ತಾವು ಭೇಟಿ ನೀಡಿದ್ದು, ಅದೇ ಮಾದರಿಯ ವಿಶ್ವ ವಿದ್ಯಾಲಯವನ್ನು ರಾಜ್ಯದಲ್ಲಿ ಸ್ಥಾಪಿಸುವ ಆಲೋಚನೆಯಿತ್ತು. ಆದರೆ ಅದು ಕೈಗೂಡಿಲ್ಲ. ಪ್ರತಿಯಾಗಿ ಉನ್ನತ ಸಂಸ್ಥೆಯೊಂದನ್ನು ಸ್ಥಾಪಿಸಿ ಸೈಬರ್‌ ಅಪರಾಧಗಳ ಬಗ್ಗೆ ಜಾಗೃತಿ ಮತ್ತು ಸುರಕ್ಷತೆಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇನ್‌ಫೋಸಿಸ್‌‍ ಫೌಂಡೇಷನ್‌ ಡೇಟಾ ಸೆಕ್ಯೂರಿಟಿ ಕೌನ್ಸಿಲ್‌ ಆಫ್‌ ಇಂಡಿಯಾ ಹಾಗೂ ಸಿಐಡಿ ಸಂಯುಕಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇನ್ಫೋಸಿಸ್‌‍ ಫೌಂಡೇಷನ್‌ನ ಟ್ರಸ್ಟಿ ಸುನೀಲ್‌ಕುಮಾರ್‌ ಧಾರೇಶ್ವರ್‌, ಡಿಎಸ್‌‍ಸಿಐನ ಸಿಇಒ ವಿನಾಯಕ ಗೂಡ್ಸೆ, ರಾಜ್ಯ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌, ಪೊಲೀಸ್‌‍ ಮಹಾ ನಿರ್ದೇಶಕ ಡಾ.ಅಲೋಕ್‌ ಮೋಹನ್‌, ಸಿಐಡಿಯ ಡಿಜಿಪಿ ಡಾ.ಎಂ.ಎ.ಸಲೀಂ, ಪೊಲೀಸ್‌‍ ಮಹಾ ನಿರ್ದೇಶಕರಾದ ಪ್ರಣಬ್‌ ಮೊಹಂತಿ, ಮಾಲಿನಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News