ನವದೆಹಲಿ,ಮಾ.16- ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ತಮ ಮಲ ಮಗಳಿಗೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯ ಕಲ್ಪಿಸಿದ ಆರೋಪದ ಬೆನ್ನಲ್ಲೇ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರಿಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ವಿಚಾರಣೆಗೆ ಬರುವಂತೆ ಯಾವುದೇ ಸಂದರ್ಭದಲ್ಲಿ ನೋಟೀಸ್ ಜಾರಿ ಮಾಡುವ ಸಾಧ್ಯತೆಗಳಿವೆ.
ನಿನ್ನೆಯಷ್ಟೇ ರಾಜ್ಯ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ರಾಮಚಂದ್ರರಾವ್ ಅವರನ್ನು ಕಡ್ಡಾಯ ರಜೆಯ ಮೇಲೆ ತೆರಳುವಂತೆ ಸೂಚನೆ ಕೊಟ್ಟಿತ್ತು. ಇದರ ಬೆನ್ನಲ್ಲೇ, ಪ್ರರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಜಾರಿ ನಿದೇರ್ಶನಾಲಯ ಹಾಗೂ ಕಂದಾಯ ಗುಪ್ತಚರ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲು ಸಜ್ಜಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕೆಗೆ ಕಾನೂನು ಬಾಹಿರವಾಗಿ ಶಿಷ್ಟಾಚಾರ (ಪ್ರೋಟೋಕಾಲ್) ಸೌಲಭ್ಯ ನೀಡಿರುವುದು ಬಹಿರಂಗಗೊಂಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ನನಗೆ ದುಬೈನಿಂದಲೇ ರನ್ಯಾ ರಾವ್ ಕರೆ ಮಾಡಿ ಶಿಷ್ಟಾಚಾರ (ಪ್ರೋಟೋಕಾಲ್) ಪ್ರಕಾರ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಕುಟುಂಬದವರು ಯಾರೇ ಬಂದರೂ ಶಿಷ್ಟಾಚಾರ ನೀಡುವಂತೆ ಡಿಜಿಪಿ ರಾಮಚಂದ್ರರಾವ್ ಅವರ ಸೂಚನೆ ಇತ್ತು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆ ಶಿಷ್ಟಾಚಾರ ವಿಭಾಗದ ಹೆಡ್ ಕಾನ್‌ಸ್ಟೇಬಲ್ ಬಸವರಾಜು ಅವರು ಡಿಆರ್‌ಐಗೆ ಹೇಳಿಕೆ ನೀಡಿದ್ದಾರೆ.
ಇದು ರಾಮಚಂದ್ರರಾವ್ ಅವರಿಗೆ ಇನ್ನಷ್ಟು ಕಾನೂನಿನ ಕುಣಿಕೆಯನ್ನು ಬಿಗಿ ಮಾಡುವ ಸಂಭವವಿದೆ. ಮಾ.3ರಂದು ದುಬೈನಿಂದ ನನಗೆ ರನ್ಯಾ ಕರೆ ಮಾಡಿ ರಾತ್ರಿ 7ಕ್ಕೆ ವಿಮಾನದಲ್ಲಿ ಬರುತ್ತೇನೆ. ನನ್ನನ್ನು ಕಸ್ಟಮ್ಸ್ ಗ್ರೀನ್ ಚಾನೆಲ್ (ಹೆಚ್ಚು ತಪಾಸಣೆ ಇಲ್ಲದೆ) ಮೂಲಕ ಕರೆದೊಯ್ಯುವಂತೆ ಸೂಚಿಸಿದ್ದರು.
ಅಂತೆಯೇ ದುಬೈ ವಿಮಾನ ಕೆಐಎನಲ್ಲಿ ಬಂದಿಳಿದ ಕೂಡಲೇ ವಿಮಾನ ನಿಲ್ದಾಣದೊಳಗೆ ತೆರಳಿ ಶಿಷ್ಟಾಚಾರ ಮೂಲಕ ರನ್ಯಾರನ್ನು ಕರೆತರಲು ಸಹೋದ್ಯೋಗಿ ಹಾಗೂ ವಿಮಾನ ನಿಲ್ದಾಣದ ಗುಪ್ತದಳ ವಿಭಾಗದ ಕಾನ್‌ಸ್ಟೇಬಲ್ ಧನುಶ್ ಕುಮಾರ್ ಜತೆ ಹೋಗ್ದೆಿ. ನನಗೆ ಚಿನ್ನ ಸಾಗಣೆ ಬಗ್ಗೆ ಮಾಹಿತಿ ಇರಲಿಲ್ಲ. ನನಗೆ ಡಿಜಿಪಿ ರಾಮಚಂದ್ರರಾವ್ ಪರಿಚಯವಿತ್ತು. ಹೀಗಾಗಿ ತಮ ಕುಟುಂಬದವರು ಹಾಗೂ ಸ್ನೇಹಿತರಿಗೆ ಶಿಷ್ಟಾಚಾರ ನೀಡುವಂತೆ ಡಿಜಿಪಿ ಸೂಚಿಸಿದ್ದರು. ಅಧಿಕಾರಿಗಳ ಸೂಚನೆಯಂತೆ ನಾನು ಕೆಲಸ ಮಾಡಿದ್ದೇನೆ. ನನಗೆ ಅವರ ಯಾವುದೇ ವ್ಯವಹಾರದ ಬಗ್ಗೆಯೂ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹೇಳಿಕೆಯ ಹಿನ್ನೆಲೆಯಲ್ಲಿ ತಮ ಮಲ ಮಗಳು ರನ್ಯಾ ಅವರಿಗೆ ಕಾನೂನುಬಾಹಿರವಾಗಿ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯವನ್ನು ರಾಜ್ಯ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಕಲ್ಪಿಸಿದ್ದರು ಎಂಬ ಆರೋಪಕ್ಕೆ ಸಾಕ್ಷಿ ಸಿಕ್ಕಂತಾಗಿದೆ.ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಹೆಡ್ ಕಾನ್‌ಸ್ಟೇಬಲ್ ಬಸವರಾಜು ಅವರನ್ನು ಡಿಆರ್‌ಐ ವಿಚಾರಣೆ ನಡೆಸಿ ಹೇಳಿಕೆ ಪಡೆದಿತ್ತು. ಇವರ ಹೇಳಿಕೆ ಡಿಜಿಪಿಗೆ ಸಂಕಷ್ಟವನ್ನು ಎದುರು ಮಾಡಿದೆ. ಸಾಕ್ಷ್ಯ ಸಿಕ್ಕಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಡಿಜಿಪಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆಗಳಿದೆ.
ಇತ್ತೀಚೆಗೆ ಚಿನ್ನದ ಕಳ್ಳಸಾಗಣೆಗಾಗಿ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ ಅವರಿಗೆ ಸಹಾಯ ಮಾಡಿದ್ದ ಪ್ರೋಟೋಕಾಲ್ ಅಧಿಕಾರಿ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರವು ನೀಡುವಂತೆ ಕರ್ನಾಟಕ ಡಿಜಿಪಿ ರಾಮಚಂದ್ರ ರಾವ್ ಅವರೇ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೇಬಲ್ ಬಸವರಾಜ್, ರಾಮಚಂದ್ರ ರಾವ್ ಅವರ ನೇರ ಆದೇಶದ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆಗಳ ಪ್ರಕಾರ ರನ್ಯಾ ರಾವ್ ಅವರ ಆಗಮನ ಮತ್ತು ನಿರ್ಗಮನವನ್ನು ಸುಗಮಗೊಳಿಸಬೇಕೆಂದು ಸೂಚನೆ ನೀಡಲಾಗಿತ್ತು ಎನ್ನಲಾಗಿದೆ.
ಈ ಹಿಂದೆ ನಟಿ ರನ್ಯಾ ಪ್ರಯಾಣಿಸುವ ವೇಳೆ ಯಾರು ಆಕೆಯನ್ನು ಚೆಕ್ ಮಾಡಿರಲಿಲ್ವಾ? ಎನ್ನುವ ಶಂಕೆ ವ್ಯಕ್ತವಾಗಿದೆ. ಇಲ್ಲವಾದ್ರೆ ಚೆಕ್ ಮಾಡ್ಬೇಡಿ ಎಂದು ಯಾರಾದ್ರೂ ನಿರ್ದೇಶನ ಕೊಟ್ಟಿದ್ರಾ ಎನ್ನುವ ಬಗ್ಗೆ ಕೂಡ ವಿಚಾರಣೆ ನಡೆಸಲಾಗುತ್ತಿದೆ. ಐಎಎಸ್ ಅಧಿಕಾರಿ ಗೌರವ್ ಗುಪ್ತಾ, ಡಿಐಜಿ ವಂಶಿಕೃಷ್ಣ ಅವರು ಏರ್‌ಪೋರ್ಟ್ ಟರ್ಮಿನಲ್ -2 ನಲ್ಲಿ ಪರಿಶೀಲನೆ ನಡೆಸಿದ್ರು. ಜೊತೆಗೆ ಏರ್‌ಪೋರ್ಟ್ ಭದ್ರತಾ ಅಧಿಕಾರಿ, ಸಿಬ್ಬಂದಿಗಳ ಹೇಳಿಕೆ ದಾಖಲಿಸಿದ್ದಾರೆ.
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ರಾವ್ ಅವರನ್ನು ತನಿಖೆ ನಡೆಸಲಾಗುತ್ತಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ. ಶರತ್ ಚಂದ್ರ, ಐಪಿಎಸ್ (ಕೆಎನ್-1997) ಅವರನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ಹ್ದುೆಗೆ ಸಮಕಾಲೀನ ಪ್ರಭಾರದಲ್ಲಿ ನೇಮಿಸಲಾಗಿದೆ.ಮುಂದಿನ ಆದೇಶದವರೆಗೆ, ಉಪ ಡಾ.ಕೆ.ರಾಮಚಂದ್ರ ರಾವ್, ಐಪಿಎಸ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿತ್ತು.