ನ್ಯೂಯಾರ್ಕ್, ಮಾ.17: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾರತೀಯ ಮೂಲದ ನಾಲ್ವರು ಮಹಿಳೆಯರನ್ನು ಕಾನ್ಸು ಲೇಟ್ ಜನರಲ್ ಆಫ್ ಇಂಡಿಯಾ ಮತ್ತು ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (ಎಫ್‌ಐಎ) ಅಭಿನಂದಿಸಿವೆ.
ಭಾರತೀಯ ಮೂಲದ ನಾಲ್ವರು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳಿಗಾಗಿ ಅವರನ್ನು ಗೌರವಿಸಲಾಗಿದೆ ಎಂದು ವರದಿಯಾಗಿದೆ. ಜೆಪಿ ಮೋರ್ಗಾನ್ ನ ಸಲಹಾ ಮತ್ತು ವಿಲೀನ ಮತ್ತು ಸ್ವಾಧೀನಗಳ ಜಾಗತಿಕ ಮುಖ್ಯಸ್ಥೆ ಅನು ಅಯ್ಯಂಗಾರ್, ಎ-ಸೀರಿಸ್ ಮ್ಯಾನೇಜ್ ಮೆಂಟ್ ಮತ್ತು ಇನ್ವೆಸ್ಟ್ ಮೆಂಟ್ ನ ಸಿಇಒ ಮತ್ತು ಸಂಸ್ಥಾಪಕಿ ಅಂಜುಲಾ ಆಚಾರ್ಯ, ಎಲ್ ಡಿಪಿ ವೆಂಚರ್ಸ್ ನ ಸಿಇಒ ಮತ್ತು ಸಂಸ್ಥಾಪಕಿ ಮತ್ತು ಮಹಿಳಾ ಉದ್ಯಮಶೀಲತಾ ದಿನಾಚರಣೆ ಸಂಸ್ಥೆಯ ಸಂಸ್ಥಾಪಕಿ ವೆಂಡಿ ಡೈಮಂಡ್ ಮತ್ತು ಸಿಎನ್‌ಬಿಸಿಯ ವರದಿಗಾರ್ತಿ ಮತ್ತು ನಿರೂಪಕಿ ಸೀಮಾ ಮೋದಿ ಅವರನ್ನು ನ್ಯೂಯಾರ್ಕ್ ನಲ್ಲಿರುವ ಭಾರತೀಯ ಕಾನ್ಸು ಲೇಟ್ ಜನರಲ್ ಗೌರವಿಸಿದೆ.
ಕಳೆದ ವಾರ ನಡೆದ 7 ನೇ ವಾರ್ಷಿಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (ಎಫ್‌ಐಎ) ಸಹಯೋಗದೊಂದಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ಅಸಾಧಾರಣ ಮಹಿಳೆಯರನ್ನು ಗೌರವಿಸಲಾಯಿತು.