ಬೆಂಗಳೂರು,ಮಾ.17- ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಕೊರತೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಬಿಜೆಪಿ ಶಾಸಕರು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸುದೀರ್ಘ ಉತ್ತರ ನೀಡಿದ ಮುಖ್ಯಮಂತ್ರಿಯವರು ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ 5 ಲಕ್ಷ ಕೋಟಿ ರೂ.ಗಳ ತೆರಿಗೆ ಈ ವರ್ಷ ಪಾವತಿಯಾಗುತ್ತಿದೆ. ಆದರೆ ಅದಕ್ಕೆ ಪ್ರತಿಯಾಗಿ ರಾಜ್ಯಸರ್ಕಾರಕ್ಕೆ ಸರಿಯಾದ ತೆರಿಗೆ ಪಾಲು ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿಯ ಸಿ.ಸಿ.ಪಾಟೀಲ್, ಕೇಂದ್ರದ ಅನುದಾನದಲ್ಲೇ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂದು ಪ್ರತಿಕ್ರಿಯಿಸಿದರು.ಬಿಜೆಪಿಯ ಮತ್ತೊಬ್ಬ ಹಿರಿಯ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಬೆಂಗಳೂರಿನಿಂದಲೇ 65 ಸಾವಿರ ಕೋಟಿ ರೂ.ಗಳಷ್ಟು ಪ್ರತಿಯಾಗಿ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಬೆಂಗಳೂರಿಗೆ ಒಂದು ಪೈಸೆ ಹಣವನ್ನೂ ನೀಡಿಲ್ಲ ಎಂದು ತಿರುಗೇಟು ನೀಡಿದರು.
ಆಗ ಮುಖ್ಯಮಂತ್ರಿಯವರು ಬೆಂಗಳೂರು ಕರ್ನಾಟಕದಲ್ಲೇ ಇದೆ ಎಂದು ಹೇಳಿದರು. ತಕ್ಷಣವೇ ಪ್ರತಿಕ್ರಿಯಿಸಿದ ಬಿಜೆಪಿಯ ಅಶ್ವತ್ಥನಾರಾಯಣ, ಸಿ.ಸಿ.ಪಾಟೀಲ್ ಮತ್ತಿತರರು ಕರ್ನಾಟಕವೂ ಕೂಡ ಭಾರತದಲ್ಲೇ ಇದೆ. ನೀವು ಬೆಂಗಳೂರಿನ ವಿಚಾರದಲ್ಲಿ ಹೇಳುವ ವಾದ ಭಾರತದ ವಿಚಾರದಲ್ಲಿ ಕರ್ನಾಟಕಕ್ಕೂ ಅನ್ವಯವಾಗುತ್ತದೆ ಎಂದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಯಿತು.
ಕೇಂದ್ರ ಸರ್ಕಾರದಿಂದ ಮೊದಲಿನಿಂದಲೂ ತೆರಿಗೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದರೆ ಅದಕ್ಕೆ ಪ್ರತಿಯಾಗಿ ಬಿಜೆಪಿ ಭೌಗೋಳಿಕತೆಯ ಆಧಾರದ ಮೇಲೆ ತೆರಿಗೆ ಹಂಚಿಕೆಯಾಗಬೇಕೆಂಬ ವಾದವನ್ನು ಬಿಜೆಪಿ ಅಲ್ಲಗಳೆಯುತ್ತಿದೆ ಎಂದರು.