ಬೆಂಗಳೂರು,ಮಾ.17- ಗ್ಯಾರಂಟಿ ಯೋಜನೆಗಳಿಗೆ ಈ ವರ್ಷದ ಫೆಬ್ರವರಿ ಅಂತ್ಯದವರೆಗೆ 75,509 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಆದರೂ ಸರ್ಕಾರ ದಿವಾಳಿಯಾಗಿಲ್ಲ, ಮುಂದಿನ 5 ವರ್ಷಗಳವರೆಗೂ ಯೋಜನೆಗಳು ಸ್ಥಗಿತಗೊಳ್ಳದೆ ಜನರಿಗೆ ತಲುಪುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
2023 ರ ಜೂ.11 ರಂದು ಆರಂಭವಾದ ಶಕ್ತಿ ಯೋಜನೆಯಡಿ ಮಹಿಳೆಯರು ಈವರೆಗೂ ಉಚಿತವಾಗಿ ತಿರುಗಾಡುತ್ತಿದ್ದಾರೆ. ಸುಮಾರು 410 ಕೋಟಿ ಜನ ಸಂಚರಿಸಿದ್ದಾರೆ.
2024-25ನೇ ಸಾಲಿನಲ್ಲಿ 52,900 ಕೋಟಿ ರೂ.ಗಳ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ನಿಗದಿ ಮಾಡಲಾಗಿತ್ತು. ಫೆಬ್ರವರಿ ಅಂತ್ಯಕ್ಕೆ 41,650 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಗಾಗಿ 28,608 ಕೋಟಿ ರೂ.ಗಳನ್ನು ನಿಗದಿ ಮಾಡಿ 22,611 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಗೃಹಜ್ಯೋತಿ ಯೋಜನೆಗೆ 9657 ಕೋಟಿ ರೂ.ಗಳನ್ನು ನಿಗದಿ ಮಾಡಿ 8389 ಕೋಟಿ ರೂ.ಗಳನ್ನು, ಅನ್ನಭಾಗ್ಯ ಯೋಜನೆಗೆ 8079 ಕೋಟಿ ರೂಗಳನ್ನು ನಿಗದಿ ಮಾಡಿ 5590 ಕೋಟಿ ರೂ.ಗಳನ್ನು ಶಕ್ತಿ ಯೋಜನಗೆ 5015 ಕೋಟಿ ರೂ.ಗಳನ್ನು ನಿಗದಿ ಮಾಡಿ 4021 ಕೋಟಿ ರೂ.ಗಳನ್ನು ಯುವನಿಧಿ ಯೋಜನೆಗೆ 650 ಕೋಟಿ ರೂ.ಗಳನ್ನು ನಿಗದಿ ಮಾಡಿ 240 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದರು
ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯಡಿ 1.26 ಕೋಟಿ ಕುಟುಂಬಗಳ ಜನ ಸೌಲಭ್ಯ ಪಡೆಯುತ್ತಿದ್ದಾರೆ. ಗೃಹಜ್ಯೋತಿಯಲ್ಲಿ 1.62 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಪಡೆಯುತ್ತಿವೆ. ನಮದು ನುಡಿದಂತೆ ನಡೆಯುವ ಸರ್ಕಾರ. 5 ವರ್ಷಗಳ ಕಾಲ ಅವಧಿಗೆ ಜನ ಆಶೀರ್ವಾದ ಮಾಡಿದ್ದಾರೆ. 5 ವರ್ಷಗಳವರೆಗೂ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದು ಸಿದ್ದರಾಮಯ್ಯ ಪ್ರಕಟಿಸಿದರು.