Tuesday, March 18, 2025
Homeರಾಜ್ಯಆರ್ ಎಸ್ ಎಸ್ ಕುರಿತು ಮುಖ್ಯಮಂತ್ರಿ ಹೇಳಿಕೆ : ವಿಧಾನಸಭೆಯಲ್ಲಿ ಕೋಲಾಹಲ

ಆರ್ ಎಸ್ ಎಸ್ ಕುರಿತು ಮುಖ್ಯಮಂತ್ರಿ ಹೇಳಿಕೆ : ವಿಧಾನಸಭೆಯಲ್ಲಿ ಕೋಲಾಹಲ

ಬೆಂಗಳೂರು, ಮಾ.17- ದ್ವೇಷದ ಭಾಷಣ ಮಾಡಿ, ಗಲಭೆ ಸೃಷ್ಟಿಸುವವರು ಆರ್ ಎಸ್ ಎಸ್ ನವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತ್ತು.
ವಿಧಾನಸಭೆಯಲ್ಲಿ ರಾಜ್ಯಪಾಲದ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡುತ್ತಿದ್ದ ಸಿದ್ದರಾಮಯ್ಯ, ತಮ್ಮ ಸರ್ಕಾರದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ಹಿಂದಿನ ಸರ್ಕಾರಕ್ಕಿಂತಲೂ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದ್ದೇವೆ. ಗಂಭೀರ ಅಪರಾಧಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ನಿನ್ನೆಯಷ್ಟೆ 75 ಕೋಟಿ ರೂ. ಮೊತ್ತದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು.

ಈಗ ತೆಗೆದುಕೊಂಡಿರುವ ಕ್ರಮಗಳಿಂದ ನನಗೆ ತೃಪ್ತಿಯಾಗಿಲ್ಲ. ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಂಡು ಅಪರಾಧಗಳ ಪ್ರಮಾಣವನ್ನು ಕಡಿಮೆ ಮಾಡುವುದು ನಮ್ಮ ಇರಾದೆ. ಆದರೆ ಅಪರಾಧ ಮಾಡುವವರೇ ನೀವು, ಆರ್ .ಎಸ್ ಎಸ್, ಬಿಜೆಪಿಯವರು. ದ್ವೇಷದ ರಾಜಕಾರಣ ಮಾಡುವವರೇ ನೀವು ಎಂದು ಮುಖ್ಯಮಂತ್ರಿಯವರು ವಾಗ್ದಾಳಿ ನಡೆಸಿದರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತ ಪಡಿಸಿ ಮಾತಿನ ಚಕಮಕಿ ನಡೆಯಿತು.

ದೇಶದ್ರೋಹದ ಕೃತ್ಯಗಳನ್ನು ಮಾಡುವ ನಿಷೇಧಿತ ಸಂಘಟನೆಗಳ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದವರು ನೀವು ಎಂದು ಬಿಜೆಪಿಯರು, ಸಿದ್ದರಾಮಯನ್ನವರನ್ನು ಚುಚ್ಚಿದರು.
ಆರ್.ಅಶೋಕ್ ಎದ್ದು ನಿಂತು, ಇಲ್ಲಿರುವ ನಾವೆಲ್ಲರೂ ಆರ್ ಎಸ್ ಎಸ್. ಈ ದೇಶದ ಪ್ರಧಾನಿ, ಗೃಹ ಸಚಿವರು ಆರ್ ಎಸ್ ಎಸ್. ಮುಖ್ಯಮಂತ್ರಿಯವರ ಹೇಳಿಕೆಯನ್ನು ಕಡಿತದಿಂದ ತೆಗೆಯಬೇಕು. ಇಲ್ಲವಾದರೆ ನಾವು ಕಲಾಪ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ನವರು ಪಿ ಎಫ್ ಐ ಏಜೆಂಟ್ ಗಳು ಎಂದು ಅಶೋಕ್ ವಾಗ್ದಾಳಿ ನಡೆಸಿದಾಗ, ಬಿಜೆಪಿಯವರು ಆರ್ ಎಸ್ ಎಸ್ ಹೇಳಿದಂತೆ ಮಾಡುತ್ತಾರೆ. ಇಲ್ಲಿ ಎದ್ದು ನಿಂತು ಗಲಾಟೆ ಮಾಡಿ ಎಂದು ಯಾರು ಹೇಳಿಕೊಟ್ಟಿದ್ದಾರೆ ಎಂದು ನಮಗೆ ಗೊತ್ತಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಆರ್ ಎಸ್ ಎಸ್ ನವರು ಬೆಂಕಿ ಹಚ್ಚುತ್ತಾರೆ. ನಿಮಗೆಲ್ಲಾ ನಾವು ಹೆಸರಿಕೊಳ್ಳುವುದಿಲ್ಲ. ಏನೇ ಮಾಡಿದರೂ ಅದಕ್ಕೆ ತಕ್ಕ ಉತ್ತರ ನೀಡಲು ನಾವು ಸಿದ್ದ. ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.

ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯ ನಾಯಕರ ಮಕ್ಕಳು ಆರ್ ಎಸ್ ಎಸ್ ಗೆ ಹೋಗಲ್ಲ. ಬಡವರ ಮಕ್ಕಳು ಮಾತ್ರ ಸೇರುತ್ತಾರೆ ಎಂದಾಗ ಬಿಜೆಪಿ ಸುನೀಲ್ ಕುಮಾರ್, ನಿಮ್ಮ ಎಷ್ಟು ಮಕ್ಕಳು ದಲಿತರ ಕಾಲೋನಿಯಲ್ಲಿದ್ದಾರೆ ಎಂದು ಪ್ರತಿವಾಗ್ದಾಳಿ ನಡೆಸಿದರು. ದಲಿತರ ಮಕ್ಕಳು ದಲಿತರ ಕಾಲೋನಿಯಲ್ಲೇ ಇರಬೇಕು ಎಂಬುದು ಬಿಜೆಪಿಯವರ ವಾದ ಎಂದು ಮುಖ್ಯಮಂತ್ರಿ ಟೀಕಿಸಿದರು.
ಮುಖ್ಯಮಂತ್ರಿಯವರ ಹೇಳಿಕೆ ಅಸಂಸದೀಯ ಪದವಲ್ಲ. ಹಾಗಾಗಿ ಕಡತದಿಂದ ತೆಗೆಯಲು ಸಾಧ್ಯವಿಲ್ಲ ಎಂದು ಸಭಾಧ್ಯಕ್ಷರು ಹೇಳಿದಾಗ, ಬಿಜೆಪಿ ದೇಶ ದ್ರೋಹಿ ಕಾಂಗ್ರೆಸ್ ಗೆ ಧಿಕ್ಕಾರ, ಆರ್ ಎಸ್ ಎಸ್ ಜಿಂದಾಬಾದ್, ಕಾಂಗ್ರೆಸ್ ನವರು ಪಾಕಿಸ್ತಾನ್ ಏಜೆಂಟ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.

ದೇಶದಲ್ಲಿ ಅಶಾಂತಿ ನಿರ್ಮಾಣವಾಗಿರುವುದು ನಿಮ್ಮಿಂದ, ನೀವು ದೇಶ ದ್ರೋಹಿಗಳು, ಬ್ರಿಟಿಷರ ಏಜೆಂಟ್ಗಳಾಗಿದ್ದವರು ಎಂದು ಮುಖ್ಯಮಂತ್ರ ಛೇಡಿಸಿದರು.
ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ ತೀವ್ರವಾದಾಗ ಸಭಾಧ್ಯಕ್ಷ ಸ್ಥಾನದಲ್ಲಿದ್ದ ಕೆ.ಎಂ.ಶಿವಲಿಂಗೇಗೌಡ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.

RELATED ARTICLES

Latest News