ಬೆಂಗಳೂರು,ಮಾ.17- ಬಿಜೆಪಿ ಸರ್ಕಾರದ ಬಳುವಳಿಯಿಂದಾಗಿ 32 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳ ಬಿಲ್ ಬಾಕಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವಕ್ಕೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣವಿಲ್ಲದಿದ್ದರೂ 2,75,686 ಕಾಮಗಾರಿಗಳನ್ನು ಮಂಜೂರು ಮಾಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 1,66,426 ಕೋಟಿ ರೂ. ಅನುಮೋದನೆ ನೀಡಿದ್ದಾರೆ. ಹೀಗಾಗಿ ನೀರಾವರಿ, ಇಂಧನ, ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 32 ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ. ಇದು ಬಿಜೆಪಿ ಸರ್ಕಾರದ ಬಳುವಳಿ ಎಂದು ಆರೋಪಿಸಿದರು.
ಇದರಿಂದಾಗಿ ನಾವು ಕಷ್ಟ ಅನುಭವಿಸಬೇಕು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ನಾವೆಷ್ಟು ಬಿಟ್ಟು ಹೋಗಿದ್ದೆವು ಎಂಬುದನ್ನು ಹೇಳುವುದಾಗಿ ತಿಳಿಸಿದರು.15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ 11,495 ಕೋಟಿ ರೂ. ಕರ್ನಾಟಕಕ್ಕೆ ಬರಬೇಕಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಳಲೇ ಇಲ್ಲ. 1 ರೂ. ಕೂಡ ಬರಲಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮೂರು ಬಾರಿ ಭೇಟಿಯಾಗಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.
ಬಜೆಟ್‌ನಲ್ಲಿ ಘೋಷಣೆ ಮಾಡಿದ ಭದ್ರಾ ಮೇಲ್ದಂಡೆ ಯೋಜನೆಯ 5,300 ಕೋಟಿ ರೂ. ಹಣವೂ ಬರಲಿಲ್ಲ. ಬಿಜೆಪಿಯವರು ಅದರ ಬಗ್ಗೆ ಮಾತನಾಡಲಿಲ್ಲ. ಕರ್ನಾಟಕಕ್ಕೆ ಅನ್ಯಾಯವಾದಾಗ ರಾಜ್ಯದ ಪರ ದನಿಯೆತ್ತಿ ನ್ಯಾಯಯುತವಾಗಿ ಬರಬೇಕಾದ್ದನ್ನು ಕೇಂದ್ರದಿಂದ ಕೇಳಲಿಲ್ಲ. ಏನೂ ಕೇಳದೆ ಅನುದಾನ ಇಲ್ಲ ಎಂದರೆ ಹೇಗೆ ಎಂದು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.ಆಗ ಬಿಜೆಪಿಯ ಅರಗ ಜ್ಞಾನೇಂದ್ರ, ರಸಗೊಬ್ಬರ, ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿ ಇವುಗಳಿಗೆಲ್ಲಾ ಹಣ ಕೊಡುವುದಿಲ್ಲವೇ? ಎಂದರು. ಇದಕ್ಕೆ ಬಿಜೆಪಿಯ ಕೆಲ ಶಾಸಕರು ದನಿಗೂಡಿಸಿದರು.
ಉತ್ತರ ಮುಂದುವರೆಸಿದ ಮುಖ್ಯಮಂತ್ರಿ, 2025-26ನೇ ಸಾಲಿನಲ್ಲಿ 5 ಲಕ್ಷ ತೆರಿಗೆ ರಾಜ್ಯದಿಂದ ಪಾವತಿಯಾಗುತ್ತದೆ. 51 ಸಾವಿರ ಕೋಟಿ ರೂ. ಮಾತ್ರ ರಾಜ್ಯಕ್ಕೆ ಬರುವ ಅಂದಾಜಿದೆ. ಶೇ.50 ರಷ್ಟು ಹಣ ಹಾಗೂ ಜಾಗವನ್ನು ರೈಲ್ವೆ ಯೋಜನೆಗಳಿಗೆ ರಾಜ್ಯಸರ್ಕಾರ ಕೊಡುತ್ತದೆ ಎಂದರು.ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಐಟಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ರಫ್ತು ತೆರಿಗೆ ಹಣದಲ್ಲಿ 1 ರೂ. ಕೂಡ ಬರುತ್ತಿಲ್ಲ ಎಂದು ದನಿಗೂಡಿಸಿದರು. ಕಲಾವಿದರಿಗೆ ಅನುದಾನ ಕೊಟ್ಟಿಲ್ಲ ಎಂದು ವಿರೋಧಪಕ್ಷದ ನಾಯಕ ಅಶೋಕ ಹೇಳಿದ್ದಾರೆ. ಹೆಚ್ಚು ಕೊಟ್ಟಿದ್ದೇವೆ ಎಂದರು.
ಆಗ ವಿರೋಧಪಕ್ಷದ ನಾಯಕ ಅಶೋಕ ಮಾತನಾಡಿ, ಕಲಾವಿದರಿಗೆ ಅನುದಾನ ನೀಡಿಲ್ಲ. ನಾನು ಅಂಕಿಅಂಶಗಳ ಮೂಲಕವೇ ಹೇಳಿದ್ದೇನೆಎಂದರು.ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಬಜೆಟ್‌ಗಿಂತ ಹೆಚ್ಚು 300 ಕೋಟಿ ಅನುದಾನ ಕೊಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಅಶೋಕ ಮಾತನಾಡಿ, ಮನಮೋಹನಸಿಂಗ್ ಪ್ರಧಾನಿಯಾಗಿದ್ದ 10 ವರ್ಷದಲ್ಲಿ ಕರ್ನಾಟಕಕ್ಕೆ ಏನೇನು ಕೊಟ್ಟಿದ್ದಾರೆ?, ನರೇಂದ್ರ ಮೋದಿಯವರು ಪ್ರಧಾನಿಯಾಗಿ 11 ವರ್ಷದಲ್ಲಿ ಏನೇನು ಕೊಟ್ಟಿದ್ದಾರೆ ಅಂಕಿ ಅಂಶ ನೀಡಿ ಎಂದು ಆಗ್ರಹಿಸಿದರು.ರಾಜ್ಯದಲ್ಲಿ 47 ರೈಲ್ವೆ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಒಂದೂ ನಿರ್ಮಾಣವಾಗಿರಲಿಲ್ಲ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿ ಮಾತನಾಡಿ, ರೈಲ್ವೆ ಯೋಜನೆಗೆ ಹಣ, ಜಾಗ ಕೊಡುವವರು ನಾವು. ಲಾಭ ಪಡೆಯುವುದು ಕೇಂದ್ರ ಸರ್ಕಾರ . ನೀವು (ಬಿಜೆಪಿ) ರೈಲು ಬಿಡಬೇಡಿ. ನಾನು ಹಿಂದಕ್ಕೆ ಹೋಗುವುದಿಲ್ಲ, ಮುಂದಕ್ಕೆ ಹೋಗುತ್ತಿದ್ದೇನೆ ಎಂದರು. ಆಗ ಬಿಜೆಪಿಯ ಕೆಲ ಶಾಸಕರು ನೀವು (ಮುಖ್ಯಮಂತ್ರಿಗೆ) ಕಂಬಿ ಇಲ್ಲದೆ ರೈಲು ಬಿಡುತ್ತೀರ ಎಂದು ಟೀಕಿಸಿದರು.
ಹೀಗೆ ವಾಗ್ವಾದ ಕೆಲಕಾಲ ನಡೆಯಿತು.