ಬ್ಯೂನಸ್ ಐರಿಸ್, ಮಾ.18 – ಸ್ನಾಯು ಸೆಳೆತಕ್ಕೊಳಗಾಗಿರುವ ಫುಟ್ ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರು ಮುಂದಿನ ಎಂಟು ದಿನಗಳ ಕಾಲ ಉರುಗೈ ಮತ್ತು ಬ್ರೆಜಿಲ್ ಎದುರಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಿಲ್ಲಿ ಅರ್ಜೆಂಟೀನಾವನ್ನು ಪ್ರತಿನಿಧಿಸುತ್ತಿಲ್ಲ.
ಕೋಚ್ ಲಿಯೋನೆಲ್ ಸ್ಕಲೋನಿ ಅವರು ಪ್ರಕಟಿಸಿದ 25 ಆಟಗಾರರ ತಂಡದಲ್ಲಿ 37 ವರ್ಷ ವಯಸ್ಸಿನ ಮೆಸ್ಸಿ ಅವರ ಹೆಸರು ಸೇರ್ಪಡೆಯಾಗಿಲ್ಲ. ಮೆಸ್ಸಿ ಅವರಿಗೆ ಆಗಿರುವ ಗಾಯದ ಗಂಭೀರತೆ ಅರಿಯಲು ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಲಾಯಿತು. ಅವರಿಗೆ ಭಾನುವಾರ ಅರ್ಜೆಂಟೀನಾ ಯುನೈಟೆಡ್ ವಿರುದ್ಧ ಗೆಲುವು ಕಂಡ ಪಂದ್ಯದಲ್ಲಿ ಸ್ನಾಯು ಸೆಳೆತ ಉಂಟಾಗಿದೆ ಎಂದು ಇಂಟರ್ ಮಿಯಾಮಿ ತಿಳಿಸಿದೆ.
ಸ್ನಾಯುವಿಗೆ ಕಡಿಮೆ ಪ್ರಮಾಣದ ಗಾಯವಾಗಿರುವುದನ್ನು ವೈದ್ಯಕೀಯ ಪರೀಕ್ಷೆ ದೃಢಪಡಿಸಿದೆ. ಚಿಕಿತ್ಸೆಗೆ ಮೆಸ್ಸಿ ಹೇಗೆ ಸ್ಪಂದಿಸುತ್ತಾರೆಂಬುದರ ಮೇಲೆ ಪಂದ್ಯಾವಳಿಗೆ ಅವರ ಲಭ್ಯತೆ ನಿರ್ಧಾರವಾಗಲಿದೆ ಎಂದು ಇಂಟರ್ ಮಿಯಾಮಿ ಹೇಳಿದೆ.
ಇಂಟರ್ ಮಿಯಾಮಿಯು 2-1 ಗೋಲುಗಳ ಜಯ ಗಳಿಸಿದ ಪಂದ್ಯದಲ್ಲಿ ಆಡುವ ವೇಳೆ ಅವರಿಗೆ ಎಡತೊಡೆಯ ಸ್ನಾಯು ಸೆಳೆತ ಉಂಟಾಗಿತ್ತು ಎಂದು ಅರ್ಜೆಂಟೀನಾದ ಮಾಧ್ಯಮ ಈ ಮುನ್ನ ವರದಿ ಮಾಡಿತ್ತು.