ನಾಗ್ಪುರ, ಮಾ.18- ಔರಂಗಜೇಬ್ ಸಮಾಧಿ ವಿವಾದದಿಂದ ನಾಗುರದಲ್ಲಿ ಉಂಟಾಗಿರುವ ಕೋಮು ಗಲಭೆ ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳ ನಂತರ ನಾಗುರ ಹಿಂಸಾತ್ಮಕ ಘರ್ಷಣೆಗಳಿಗೆ ಸಾಕ್ಷಿಯಾಯಿತು.
ಹಿಂಸಾಚಾರವು ಪೂರ್ವಯೋಜಿತವಾಗಿದೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಹೇಳಿಕೊಂಡಿದೆ. ನಗರದ ಮಹಲ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವಿನ ಭಾರಿ ಘರ್ಷಣೆಯ ನಂತರ ಸುಮಾರು 60 ರಿಂದ 65 ಗಲಭೆಕೋರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 25 ರಿಂದ 30 ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಸುಮಾರು 25 ಬೈಕ್‌ಗಳು ಮತ್ತು ಮೂರು ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಾಗುರ ಸೆಂಟ್ರಲ್‌ನ ಬಿಜೆಪಿ ಶಾಸಕ ಪ್ರವೀಣ್ ದಾಟ್ಲಿ, ಹಿಂಸಾತ್ಮಕ ಘರ್ಷಣೆಗಳು ಪೂರ್ವಯೋಜಿತವಾಗಿವೆ ಎಂದು ಹೇಳಿದ್ದಾರೆ. ಉದ್ದೇಶಪೂರ್ವಕವಾಗಿ ಒಂದು ಕೋಮಿನವರು ಹಿಂದೂ ಮನೆಗಳು ಮತ್ತು ಅಂಗಡಿಗಳಿಗೆ ಮಾತ್ರ ಪ್ರವೇಶಿಸಿ ದಾಂಧಲೆ ನಡೆಸಿದೆ.
ಮೊದಲಿಗೆ, ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಮುರಿದು ನಂತರ ಪೂರ್ವಯೋಜಿತ ರೀತಿಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಹಿಂಸಾಚಾರವನ್ನು ನಡೆಸಲಾಗಿರುವುದನ್ನು ನೋಡಿದರೆ ಗಲಭೆ ಪೂರ್ವನಿಯೋಜಿತ ಕೃತ್ಯ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.