ಕೋಲಾರ,ಮಾ.18- ಹಣಕ್ಕಾಗಿ ಯುವಕನನ್ನು ಕೊಲೆ ಮಾಡಿದ ಆರೋಪಿ ಮನೆಗೆ ರೊಚ್ಚುಗೆದ್ದ ಗ್ರಾಮಸ್ಥರು ಬೆಂಕಿ ಹಚ್ಚಿ -ರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಗುಂತುವಾರಿಪಲ್ಲಿ ಗ್ರಾಮದ ನಿವಾಸಿ ಮಂಜುನಾಥ್ (33) ಕೊಲೆಯಾದ ಯುವಕ.
ಕೂಲುಗುರ್ಕಿ ಗ್ರಾಮದ ನಿವಾಸಿ ಶ್ರೀಮೂರ್ತಿ ತನ್ನ ಸಹಚರ ಮೋಹನ್‌ನೊಂದಿಗೆ ಸೇರಿ ಮಂಜುನಾಥ್‌ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಮೃತನ ಸಂಬಂಧಿಕರು ಆರೋಪಿ ಶ್ರೀಮೂರ್ತಿ ನಿವಾಸದ ಬಳಿ ತೆರಳಿ ಮನೆಗೆ ಬೆಂಕಿ ಹಚ್ಚಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.
ಸುದ್ದಿ ತಿಳಿದು ಶ್ರೀನಿವಾಸಪುರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಮುಂದಾದಾಗ ಅಗ್ನಿಶಾಮಕ ವಾಹನ ತಡೆದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೂಲುಗುರ್ಕಿ ಗ್ರಾಮದ ಬಳಿ ನೂರಾರು ಜನರು ಜಮಾಯಿಸಿದ್ದರು. ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದ್ದು, ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಶ್ರೀನಿವಾಸಪುರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸಪಟ್ಟರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.