ಹಾಸನ, ಮಾ.18- ರೊಚ್ಚಿಗೆದ್ದ ಒಂಟಿಸಲಗವೊಂದು ಇಟಿಎಫ್ ಸಿಬ್ಬಂದಿಗಳನ್ನು ಅಟ್ಟಾಡಿಸಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಲೂರು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು ಅರಣ್ಯ ಇಲಾಖೆ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಮಾಡಲಾಗುತ್ತಿದೆ.
ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಪ್ರಶಾಂತ್ ಹಾಗೂ ಸುನೀಲ್ ಆನೆಗಳ ಚಲನವಲನಗಳನ್ನು ಗಮನಿಸುತ್ತಿದ್ದಾಗ ಜುಲ್ಟಿ ಎಂಬುವವರ ತೋಟದಲ್ಲಿ ಪ್ರತ್ಯಕ್ಷವಾದ ವಿಕ್ರಾಂತ್ ಎಂಬ ಹೆಸರಿನ ಒಂಟಿ ಸಲಗ ಸಿಬ್ಬಂದಿಗಳನ್ನು ಕಂಡು ಅವರ ಮೇಲೆ ದಾಳಿ ಮಾಡಿದೆ.
ಜೀವ ಉಳಿಸಿಕೊಳ್ಳಲು ಸಿಬ್ಬಂದಿಗಳು ವೇಗಾಗಿ ಓಡಲಾರಂಬಿಸಿದ್ದು ಬೆನ್ನಿಗೆ ಬಿದ್ದ ಒಂಟಿ ಸಲಗ ಸುಮಾರು ದೂರ ಅಟ್ಟಿಸಿಕೊಂಡು ಬಂದಿದೆ. ತಮ್ಮ ವೇಗ ಮತ್ತಷ್ಟು ಹೆಚ್ಚಿಸಿಕೊಂಡ ಸಿಬ್ಬಂದಿಗಳು ಓಡಿ ಓಡಿ ಕೂದಲೆಳೆ ಅಂತರದಲ್ಲಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ.
ಒಂಟಿ ಸಲಗದ ದಾಳಿಯಿಂದ ಜೀವ ಉಳಿಸಿಕೊಂಡ ದೃಶ್ಯ ಸೆರೆಯಾಗಿದ್ದು ಮೈ ಜುಮ್ಮೆನಿಸುವಂತಿದೆ ಒಂದು ವೇಳೆ ಆನೆಗೆ ಸಿಕ್ಕಿಬಿದ್ದಿದ್ದರೆ ಸಿಬ್ಬಂದಿಗಳ ಜೀವಕ್ಕೆ ಹಾನಿಯಾಗುತ್ತಿತ್ತು ಎಂದು ಸಾವು ಗೆದ್ದು ಬಂದ ಪ್ರಶಾಂತಗ ಹಾಗೂ ಸುನೀಲ್ ರೋಚಕ ಘಟನೆ ಬಗ್ಗೆ ತಿಳಿಸಿದ್ದಾರೆ.