ಬೆಂಗಳೂರು, ಮಾ.19 – ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ವೇದಿಕೆ ಸಿದ್ದಗೊಳ್ಳುತ್ತಿದ್ದು, ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಸಾರಥಿ ಯಾರು? ಎನ್ನುವುದು ಸ್ಪಷ್ಟವಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯ ಬಳಿಕವೇ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿಗೆ ಚಾಲನೆ ದೊರೆಯಲಿದೆ.
ಏಪ್ರಿಲ್ ಮೊದಲ ವಾರದಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಇದಾದ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಥವಾ ಆವಿರೋಧ ಆಯ್ಕೆ ನಡೆಯುವ ಸಾಧ್ಯತೆ ಗೋಚರಿಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆ ನಡೆಸಲು ಅನುಕೂಲವಾಗುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ 23 ಜಿಲ್ಲಾ ಅಧ್ಯಕ್ಷರ ನೇಮಕಾತಿ ನಡೆಸಲಾಗಿದ್ದು, ಎರಡನೇ ಹಂತದಲ್ಲಿ 8 ಜಿಲ್ಲೆಗಳ ಅಧ್ಯಕ್ಷರ ನೇಮಕಾತಿ ಮಾಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು ಗ್ರಾಮಾಂತರ, ಹಾಸನ, ಉಡುಪಿ ಮತ್ತು ಕೊಡಗು ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ನೇಮಕಾತಿ ಬಾಕಿ ಉಳಿದಿದೆ. ಈ ತಿಂಗಳ ಅಂತ್ಯದೊಳಗೆ ಬಾಕಿ ಇರುವ ಜಿಲ್ಲೆಗಳ ಅಧ್ಯಕ್ಷರ ನೇಮಕಾತಿಯೂ ನಡೆಯಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆ ನಡೆಸಲು ಕನಿಷ್ಠ ಶೇ.50ರಷ್ಟು ಜಿಲ್ಲಾ ಅಧ್ಯಕ್ಷರ ನೇಮಕಾತಿ ಮುಗಿದಿರಬೇಕೆನ್ನುವುದು ಪಕ್ಷದ ನಿಯಮ. ರಾಜ್ಯದಲ್ಲಿ ಶೇ.75ರಷ್ಟು ಜಿಲ್ಲೆಗಳಲ್ಲಿ ಅಧ್ಯಕ್ಷರ ನೇಮಕಾತಿ ಅಂತ್ಯಗೊಂಡಿದೆ. ಹಾಗಾಗಿ ರಾಜ್ಯ ಅಧ್ಯಕ್ಷರ ಚುನಾವಣೆ ನಡೆಸಲು ಯಾವುದೇ ತೊಡಕುಗಳು ಪಕ್ಷದಲ್ಲಿ ಇಲ್ಲ.
ವಿಜಯೇಂದ್ರ ಸ್ಪರ್ಧೆ? :
ಬಿಜೆಪಿ ಅಧ್ಯಕ್ಷರ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ತಮ್ಮನ್ನೇ ಮುಂದುವರೆಸುವಂತೆ ಈಗಾಗಲೇ ಅವರು ಹೈಕಮಾಂಡ್ ಮುಖಂಡರುಗಳನ್ನು ಭೇಟಿಯಾಗಿ ಆಶೀರ್ವಾದ ಕೋರಿದ್ದಾರೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಿದರೂ ಸ್ಪರ್ಧೆ ಮಾಡಲು ಸಜ್ಜಾಗಿದ್ದಾರೆ. ಗೆಲುವಿಗೆ ಅಗತ್ಯವಿರುವ ತಂತ್ರಗಾರಿಕೆಗಳನ್ನೂ ಮಾಡುತ್ತಿದ್ದಾರೆ.
ಬಿಜೆಪಿ ಅಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ಮುಂದುವರೆಸುವುದನ್ನು ತಡೆಯಲು ಪಕ್ಷದಲ್ಲಿ ಹಿರಿಯ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ಸಕ್ರಿಯರಾಗಿದ್ದು, ತಮ್ಮದೇ ಆದ ಕಾರ್ಯತಂತ್ರಗಳನ್ನು ರೂಪಿಸತೊಡಗಿದ್ದಾರೆ. ವಿಜಯೇಂದ್ರ ಅವರನ್ನು ಬದಲಾವಣೆ ಮಾಡುವಂತೆ ಪಟ್ಟು ಹಿಡಿದಿರುವ ಯತ್ನಾಳ್ ಬಣ ಅಧ್ಯಕ್ಷರನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕು ಎಂದು ಹೈಕಮಾಂಡ್‌ಗೆ ಆಗ್ರಹಿಸಿದೆ. ಚುನಾವಣೆಯಲ್ಲಿ ವಿಜಯೇಂದ್ರ ವಿರುದ್ಧ ತಮ್ಮ ಬಣದ ಸ್ಪರ್ಧೆ ಖಚಿತವೆಂದು ಈಗಾಗಲೇ ಯತ್ನಾಳ್ ಘೋಷಿಸಿದ್ದಾರೆ.
ಯತ್ನಾಳ್ ಬಣದಿಂದ ಯಾರು ?
ಪಕ್ಷದ ಹೈಕಮಾಂಡ್ ಯಾವ ಸಮುದಾಯದವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ತೀರ್ಮಾನಿಸುತ್ತದೆಯೋ ಅದರಂತೆ ಸ್ಪರ್ಧೆ ಮಾಡಲು ಯತ್ನಾಳ್ ಬಣ ತನ್ನ ತಂತ್ರಗಾರಿಕೆ ರೂಪಿಸಲಿದೆ. ಲಿಂಗಾಯತ ಸಮುದಾಯದಲ್ಲಿ ಬಸನಗೌಡ ಯತ್ನಾಳ್, ಹಿಂದುಳಿದ ವರ್ಗದ ಪೈಕಿ ಮಾಜಿ ಸಚಿವ ಕುಮಾರ ಬಂಗಾರಪ್ಪ, ಎಸ್ಸಿ-ಎಸ್ಪಿ ಪೈಕಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಬಯಸಿದರೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ.ಸೋಮಣ್ಣ, ಮುರುಗೇಶ್ ನಿರಾಣಿ, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಡಾ.ಅಶ್ವತ್ಥ ನಾರಾಯಣ, ಸಿ.ಟಿ.ರವಿ ಅವರು ಸ್ಪರ್ಧಿಸುವ ಅಭಿಲಾಶೆ ಹೊಂದಿದ್ದಾರೆ ಎನ್ನಲಾಗಿದೆ.
ರಾಜ್ಯ ಬಿಜೆಪಿಗೆ ಯಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಸೂಕ್ತ ಎನ್ನುವುದರ ಬಗ್ಗೆ ಬಿಜೆಪಿ ಹೈಕಮಾಂಡ್ ಪ್ರಮುಖರ ಜೊತೆ ಚರ್ಚಿಸಿ ಮಾಹಿತಿ ಸಂಗ್ರಹಿಸಿದೆ ಎಂದು ಹೇಳಲಾಗಿದೆ. ತನ್ನದೇ ಆದ ಲೆಕ್ಕಾಚಾರಗಳೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿ ವಿಜಯೇಂದ್ರ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ತಿಳಿದು ಬಂದಿದೆ.