ವಾಷಿಂಗ್ಟನ್, ಮಾ.19- ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕ್ಷೇಮವಾಗಿ ವಾಪಸ್ ಆಗಿರುವ ನಾಲ್ವರು ಗಗನಯಾತ್ರಿಗಳನ್ನು ನಾಸಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಗಗನಯಾತ್ರಿಗಳನ್ನು ಅವರು ಧರಿಸಿದ್ದ ವಿಶೇಷ ಸ್ಪೇಸ್ ಸೂಟ್ ನಲ್ಲೇ ಹೆಲಿಕಾಪ್ಟರ್ ಮೂಲಕ ಅವರನ್ನು ನಾನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಷ್ಟು ದಿನ ಬಾಹ್ಯಾಕಾಶದಲ್ಲಿದ್ದ ಕಾರಣ ಇಲ್ಲಿನ ವಾತಾವರಣಕ್ಕೆ ಗಗನಯಾತ್ರಿಗಳು ಹೊಂದಿಕೊಳ್ಳಬೇಕಿದೆ. ಅವರ ಆರೋಗ್ಯ ಸ್ಥಿತಿ ಸ್ಪಂದಿಸಬೇಕಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತೆ. ಸಮಗ್ರವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ.
ಕಡಲ ತೀರದ ಮೇಲೆ ಇಳಿದ ನೌಕೆಯಿಂದ ಮೊದಲಿಗೆ ನಾಸಾ ಗಗನಯಾತ್ರಿ ಹೇಗ್ ರನ್ನು ಹೊರಗೆ ತರಲಾಯಿತು. ನಂತರ ರಷ್ಯಾದ ಗಗನನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನು ಹೊರಗೆ ತರಲಾಯಿತು. ಇವರಿಬ್ಬರೂ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಸುನೀತಾ ಮತ್ತು ವಿಲ್ಲೋರ್ ಅವರನ್ನು ಕರೆತರಲು 8 ದಿನಗಳ ಹಿಂದಷ್ಟೇ ಬಾಹ್ಯಾಕಾಶಕ್ಕೆ ತೆರಳಿದ್ದರು.
ತಕ್ಷಣ ಎದ್ದು ನಿಲ್ಲಲು ಆಗದಿದ್ದರೂ ಇವರಿಬ್ಬರ ದೇಹಸ್ಥಿತಿಯಲ್ಲಿ ಅಷ್ಟಾಗಿ ಬದಲಾವಣೆ ಕಂಡುಬಂದಂತೆ ಕಾಣಲಿಲ್ಲ. ಇನ್ನು ಮೂರನೆಯದಾಗಿ ಸುನೀತಾ ವಿಲಿಯಮ್ ಅವರನ್ನು ಹೊರಗೆ ಕರೆತರಲಾಯಿತು. ಬರೋಬ್ಬರಿ 9 ತಿಂಗಳ ಬಳಿಕ ಭೂಮಿಗೆ ಬಂದ ಸುನೀತಾರ ಸಂತಸಕ್ಕೆ ಪಾರವೇ ಇರಲಿಲ್ಲ. ಎದ್ದು ನಿಲ್ಲಲೂ ಆಗದ ಸುನಿತಾ ಕುಳಿತಲ್ಲೇ ನಗುಮೊಗದೊಂದಿಗೆ ಕೈಬೀಸಿ ಸಂಭ್ರಮ ವ್ಯಕ್ತಪಡಿಸಿದರು.
13.28ಕ್ಕೆ ಶುರುವಾಗಿ ಕೊನೆಯದಾಗಿ ಸುನೀತಾ ಜತೆಗಿದ್ದ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಲೋರ್ ಅವರನ್ನು ಹೊರಗೆ ತರಲಾಯಿತು. ಈ ಎಲ್ಲಾ ಪ್ರಕ್ರಿಯೆಗಳು ನಸುಕಿನ 3. 4.27ರ ಸುಮಾರಿಗೆ ಮುಕ್ತಾಯಗೊಂಡಿತು ಎಂದು ವರದಿಯಾಗಿದೆ.
ಸುನೀತಾ ವಿಲಿಯಮ್ಸ್ ಸೇರಿ ನಾಲ್ವರು ಗಗನಯಾತ್ರಿಗಳಿದ್ದ ನೌಕೆಯ ಕ್ಯಾಪ್ಸುಲ್ ಸಮುದ್ರದಲ್ಲಿ ಬಿದ್ದು ತೇಲುತ್ತಿದ್ದಂತೆಯೇ ಕೆಲವೇ ಕ್ಷಣಗಳಲ್ಲಿ ಮೂರು ಬೋಟ್ಗಳಲ್ಲಿ ಅಮೆರಿಕ ನೌಕಾಪಡೆ ಸ್ಥಳಕ್ಕೆ ಧಾವಿಸಿತು. ತಕ್ಷಣ ಸಿದ್ಧವಾಗಿ ನಿಂತಿದ್ದ ಸ್ಪೇಸ್ ಎಕ್ಸ್‌ನ ರಿಕವರಿ ಶಿಪ್ ಕೂಡ ಸ್ಥಳಕ್ಕೆ ಧಾವಿಸಿತು. ನೌಕಾಪಡೆ ಸಿಬ್ಬಂದಿ ಮೊದಲಿಗೆ ಗಗನಯಾತ್ರಿಗಳಿದ್ದ ಕ್ಯಾನ್ಸುಲ್ ನಿಯಂತ್ರಣಕ್ಕೆ ರೋಪ್ ಗಳಿಂದ ಕಟ್ಟಿ ಹಡಗಿನ ಬಳಿಗೆ ಎಳೆದೊಯ್ದರು. ಬಳಿಕ ಅತ್ಯಂತ ನಾಜೂಕಾಗಿ ಕ್ಯಾನ್ಸುಲ್ ಅನ್ನು ಹಡಗಿಗೆ ಸ್ಥಳಾಂತರ ಮಾಡಿದರು. ಇದಾದ ಕೆಲವೇ ಹೊತ್ತಿನಲ್ಲಿ ನಟ್ಟು, ಬೋಲ್ಟ್ಗಳಿಂದ ಟೈಟಾಗಿದ್ದ ಕ್ಯಾಪ್ಟು ಲ್‌ನ ಡೋರ್ ಅನ್ನು ತೆಗೆಯಲಾಯಿತು.
45 ದಿನಗಳ ರಿಹ್ಯಾಬಿಲಿಟೇಶನ್ ಚಿಕಿತ್ಸೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕ್ಷೇಮವಾಗಿ ಹಿಂತಿರುಗಿರುವ ಗಗನಯಾತ್ರಿಗಳಿಗೆ ನಾಸಾ 45 ದಿನಗಳ ರಿಹ್ಯಾಬಿಲಿಟೇಶನ್ ಯೋಜನೆ ರೂಪಿಸಿದೆ. ಗಗನ ಯಾತ್ರಿಗಳು ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಅವಕಾಶ ನೀಡಬೇಕಿರುವುದರಿಂದ ಅವರಿಗೆ 45 ದಿನಗಳಲ್ಲಿ ದೇಹದ ಚಟುವಟಿಕೆ ಮತ್ತು ಆರೋಗ್ಯ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ನೆಲದ ಮೇಲೆ ನಡೆಯಲು ಸಹಾಯ, ಆಹಾರ, ಅಗತ್ಯ ಔಷಧಗಳನ್ನು ಒದಗಿಸುವುದು, ಕಾಲುಗಳನ್ನು ಬಲಪಡಿಸುವ ವ್ಯಾಯಾಮ, ಕಾಲುಗಳು ತಮ್ಮ ನಿಯಂತ್ರಣಕ್ಕೆ ಬರುವವರೆಗೂ ಮೇಲ್ವಿಚಾರಣೆ ನಡೆಯಲಿದೆ.ಗುರುತ್ವಾಕರ್ಷಣೆ ಪ್ರಭಾವ ಇಲ್ಲದ ಕಾರಣ ದೇಹದಲ್ಲಿ ಕೆಲ ಬದಲಾವಣೆ ಆಗುತ್ತದೆ. ದೇಹ ಭಾರವಿಲ್ಲ ಎನ್ನುವಂತೆ ಅವರಿಗೆ ಅನಿಸುತ್ತದೆ. ಜೊತೆಗೆ ಅವರ ದೇಹದ ಚರ್ಮ ಮೊದಲಿನಂತೆ ಇರುವುದಿಲ್ಲ ಸ್ನಾಯು, ಮೂಳೆಗಳ ಸಾಂದ್ರತೆ ಶೇ.30 ಕ್ಷೀಣಿಸುತ್ತದೆ. ಮೂಳೆಗಳು ಬಲ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ.
ಈ ಕಾರಣಗಳಿಂದ ಗಗನಯಾನಿಗಳಿಗೆ ಮೂಳೆ ಮುರಿತದ ಸಮಸ್ಯೆ ಎದುರಿಸುತ್ತಾರೆ. ಶೂನ್ಯ ಗುರುತ್ವಾಕರ್ಷಣೆ ಮತ್ತು ಹೆಚ್ಚಿನ ವಿಕಿರಣದಲ್ಲಿ ದೀರ್ಘಕಾಲ ಬಾಹ್ಯಾಕಾಶದಲ್ಲಿ ಕಾಲ ಕಳೆದಿದ್ದರಿಂದ ಮೂಳೆಗಳ ದೌರ್ಬಲ್ಯ, ದೃಷ್ಟಿಯ ಮೇಲೆ ಪರಿಣಾಮ ಉಂಟಾಗಬಹುದು.
ವಿಕಿರಣವು ಕ್ಯಾನ್ಸ ರ್ ಮತ್ತು ನರಮಂಡಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.ಭೂಮಿಗೆ ವಾಪಸ್ ಆದ ತಕ್ಷಣ ಗಗನಯಾನಿಗಳಿಗೆ ನಡೆದಾಡಲು ಆಗುವುದಿಲ್ಲ. ಕೆಲವು ಕಾಲ ನಿಂತುಕೊಳ್ಳಲೂ ಸಮಸ್ಯೆ ಆಗಲಿದೆ. ಅಧಿಕ ರೇಡಿಯೇಷನ್ ಕಾರಣ ಕ್ಯಾನ್ಸ ರ್ ಭೀತಿ, ಡಿಎನ್ಎಗೆ ಹಾನಿಯಯಾಗುವ ಸಾಧ್ಯತೆಯಿದೆ.
ಒಂಟಿತನ, ಮಾನಸಿಕ ಒತ್ತಡ, ನಿದ್ರಾಹೀನತೆ, ದೃಷ್ಟಿ ಕೇಂದ್ರೀಕರಿಸಲು ಸಮಸ್ಯೆ ಅನುಭವಿಸುತ್ತಾರೆ. ಈ ಎಲ್ಲವುಗಳಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ.ವಿಲಿಯಮ್ಸ್ ಮತ್ತು ವಿಲೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 121,347,491 ಮೈಲುಗಳಷ್ಟು ಪ್ರಯಾಣಿಸಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳನ್ನು ಕಳೆದ ಇವರು ಭೂಮಿಯ ಸುತ್ತ 4,576 ಕಕ್ಷೆಗಳನ್ನು ಪೂರ್ಣಗೊಳಿಸಿದರು ಎಂದು ನಾಸಾ ಹೇಳಿದೆ. ವಿಲಿಯಮ್ಸ್ ತನ್ನ ಮೂರು ಹಾರಾಟಗಳಲ್ಲಿ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ ಮತ್ತು ವಿಲೋರ್ ತನ್ನ ಮೂರು ಹಾರಾಟಗಳಲ್ಲಿ 464 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.