ಬೆಂಗಳೂರು,ಮಾ.19– ಮಲೆನಾಡು ಭಾಗದಲ್ಲಿರುವ ಅಕೇಶಿಯ ಮತ್ತು ನೀಲಗಿರಿ ಮರಗಳನ್ನು ತೆಗೆಯಬೇಕೆಂದು ಜೆಡಿಎಸ್ ನಾಯಕ ಎಸ್.ಎಲ್.ಭೋಜೇಗೌಡ ವಿಧಾನಪರಿಷತ್‌ನಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
2025-26ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಕೇಶಿಯ ಮತ್ತು ನೀಲಗಿರಿ ಮರಗಳು ಮಲೆನಾಡು ಭಾಗದಲ್ಲಿ ರಾರಾಜಿಸುತ್ತಿವೆ. ಅದನ್ನು ತೆಗೆದರೆ ಒಳ್ಳೆಯ ಪರಿಸರ ಆಗಲಿದೆ. ಆ ಮರಗಳ ಪ್ರದೇಶದಲ್ಲಿ ಹಣ್ಣುಗಳ ಗಿಡಗಳನ್ನು ಬೆಳೆಸಿ ಎಂದು ಸಲಹೆ ಮಾಡಿದರು. ಕೊಡಗು, ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮಾನವ-ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಹಳ್ಳಿಕಾರ್, ಅಮೃತ್‌ಮಹಲ್, ಮಲೆನಾಡು ಗಿಡ್ಡ ತಳಿಯ ಜಾನುವಾರು ತಳಿಗಳನ್ನು ರಕ್ಷಣೆ ಮಾಡಬೇಕು ಎಂದ ಅವರು, ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಬಹಳ ಕೆಟ್ಟದಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಶೇ.60ರಷ್ಟು ಶಿಕ್ಷಕರ ಕೊರತೆ ಸರ್ಕಾರಿ ಶಾಲೆಗಳಲ್ಲಿವೆ ಎಂದು ಹೇಳಿದರು.
ಅತಿಥಿ ಶಿಕ್ಷಕರಿಗೆ ಐದಾರು ತಿಂಗಳಿನಿಂದ ಗೌರವಧನವನ್ನೇ ನೀಡಿಲ್ಲ. ಅವರಿಗೆ ಸಕಾಲಕ್ಕೆ ಗೌರವಧನ ನೀಡುವಂತಾಗಬೇಕು ಎಂದು ಆಗ್ರಹಿಸಿದರು. 4.9 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದರೂ ಶಿಕ್ಷಣದ ಮೂಲ ಸೌಕರ್ಯ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಿಲ್ಲ. ದಿನೇ ದಿನೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.
ಶೇ.55ರಷ್ಟು ಮಕ್ಕಳು ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕನ್ನಡ ಮಾಧ್ಯಮದ ಶೇ.80ರಷ್ಟು ಶಾಲೆಗಳು ಮುಚ್ಚುವ ಹಂತ ತಲುಪಿವೆ. ಒಂದು ಸಾವಿರ ಪದವಿಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರೇ ಇಲ್ಲ. ಐಟಿಐ ಕಾಲೇಜುಗಳ ಪರಿಸ್ಥಿತಿಯೂ ಚೆನ್ನಾಗಿಲ್ಲ ಎಂದು ಹೇಳಿದರು.