ಬೆಂಗಳೂರು,ಮಾ.19- ಬೀದರ್‌ನಿಂದ ಔರಾದ್‌ಗೆ ಚಲಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ದಾರಿ ಮಧ್ಯೆಯೇ ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಹಾಗೂ ಚಾಲಕ, ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
25 ಪ್ರಯಾಣಿಕರಿದ್ದ ಈ ಬಸ್ ಇಂದು ಮಧ್ಯಾಹ್ನ 11.30ರ ಸುಮಾರಿಗೆ ಸಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೂರ್ಯ ಡಾಬಾ ಬಳಿ ಹೋಗುತ್ತಿದ್ದಾಗ ಮಾರ್ಗಮಧ್ಯೆಯೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ತಕ್ಷಣ ಚಾಲಕ ಹಾಗೂ ನಿರ್ವಾಹಕರ ಸಮಯ ಪ್ರಜ್ಞೆಯಿಂದ ಬಸ್‌ನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿ ರಕ್ಷಿಸಿದ್ದಾರೆ.ನಂತರ ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿದ್ದು, ಸಿಬ್ಬಂದಿ ವಾಹನದೊಂದಿಗೆ ಬಂದು ಬೆಂಕಿಯನ್ನು ನಂದಿಸಿದ್ದು, ಬಸ್ ಸಂಪೂರ್ಣ ಸುಟ್ಟು ಹಾನಿಯಾಗಿದೆ. ಈ ಬಗ್ಗೆ ಸಂತಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬ್ಯಾಟರಿ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.