ಬೆಂಗಳೂರು,ಮಾ.20- ಸುಪ್ರೀಂಕೋರ್ಟ್ ವಿಭಾಗೀಯ ಪೀಠವನ್ನು ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಸ್ಥಾಪಿಸಬೇಕೆಂದು ಆಡಳಿತ ಪಕ್ಷದ ಶಾಸಕ ಎನ್.ಎಚ್.ಕೋನರೆಡ್ಡಿ ಆಗ್ರಹಿಸಿದರು. ವಿಧಾನಸಭೆಯಲ್ಲಿಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಕಾನೂನು ತಗಾದೆಗಳಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ವರೆಗೂ ಹೋರಾಟ ನಡೆಸಬೇಕಾದ ಸಂದರ್ಭ ಬಂದಾಗ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
ಸುಪ್ರೀಂಕೋರ್ಟ್ ವಿಭಾಗೀಯ ಪೀಠವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಶಾಸಕರು ಬೆಂಗಳೂರಿನಲ್ಲಿ ವಿಭಾಗೀಯ ಪೀಠವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಚರ್ಚೆಯಲ್ಲಿ ಭಾಗವಹಿಸಿ, ವಿಶೇಷ ಚೇತನ ಮಕ್ಕಳ ಪಾಲನೆಗೆ ಹೆಚ್ಚಿನ ಒತ್ತು ನೀಡಬೇಕು. ಇತ್ತೀಚೆಗೆ ಪ್ಯಾರಾ ಲಿಂಪಿಕ್ ಸ್ಪರ್ಧೆಯಲ್ಲಿ ವಿಶೇಷಚೇತನ ಮಕ್ಕಳು 33ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಅವರಿಗೆ ತರಬೇತಿ ಕೊಟ್ಟು ವಿದೇಶದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಮಾಡುವುದು ಸುಲಭದ ವಿಚಾರವಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ವಿಶೇಷಚೇತನ ಮ ಕ್ಕಳ ಶಿಕ್ಷಕರಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಮಹಿಳೆಯರ ಸಬಲೀಕರಣಕ್ಕೆ ಸಾಲಸೌಲಭ್ಯ ನೀಡಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್‌ನ ಸಿ.ಎನ್.ಬಾಲಕೃಷ್ಣ, ಕೃಷಿ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಅಡಿಕೆ ಬೆಳೆಗಾರರಿಗೆ ಅಗತ್ಯ ಔಷಧೋಪಚಾರಗಳನ್ನು ಒದಗಿಸಬೇಕು. ತೆಂಗು ಬೆಳೆಗೆ ಕಪ್ಪುತಲೆ ಹುಳುನಿಂದಾಗಿ ಇಳುವರಿ ಶೇ.50ರಷ್ಟು ಕುಸಿದಿದೆ. ನಷ್ಟ ಪರಿಹಾರವನ್ನು ಪಾವತಿಸಬೇಕು ಎಂದು ಒತ್ತಡ ಹಾಕಿದರು.