ಬೆಂಗಳೂರು, ಜ.31: ಕಾನ್ಫಿಡೆಂಟ್ ಗ್ರೂಪ್ನ ಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣದ ಸಮಗ್ರ, ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಿಎನ್ಎಸ್ಎಸ್ ಕಾಯ್ದೆಯ ಸೆಕ್ಷನ್ 194(3) ಮತ್ತು 194(4) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು SITಗೆ ವರ್ಗಾಯಿಸಲಾಗಿದೆ. ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಐಪಿಎಸ್ ಅವರನ್ನು ಮುಖ್ಯ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಶ್ರೀ ಅಕ್ಷಯ್ ಹಾಕೆ, ಐಪಿಎಸ್ ಸೇರಿದಂತೆ ವಿವಿಧ ವಿಭಾಗಗಳು ಮತ್ತು ವಿಶೇಷ ಘಟಕಗಳಿಂದ ನಿಯೋಜಿಸಲಾದ ಹಿರಿಯ ಅಧಿಕಾರಿಗಳು ತಂಡದ ಸದಸ್ಯರಾಗಿರುತ್ತಾರೆ.
ವಿಶೇಷ ತನಿಖಾ ತಂಡವು ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತರಾದ ಸಿ. ವಂಶಿ ಕೃಷ್ಣ, ಐಪಿಎಸ್ ಅವರ ಸಮಗ್ರ ಮೇಲ್ವಿಚಾರಣೆಯಡಿಯಲ್ಲಿ ಕಾರ್ಯನಿರ್ವಹಿಸಲಿದೆ.
ಡಾ. ಸಿ.ಜೆ. ರಾಯ್ ಅವರು 30-01-2026ರಂದು ಬೆಂಗಳೂರು ಹೊಸೂರು ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಪ್ರಕರಣದ ಎಲ್ಲಾ ಆಯಾಮಗಳನ್ನೂ ಪರಿಶೀಲಿಸಿ ಸತ್ಯಾಂಶ ಹೊರತೆಗೆಯುವ ಉದ್ದೇಶದಿಂದ, ಎಲ್ಲಾ ಸಂಬಂಧಿತ ಅಧಿಕಾರಿಗಳು SITಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಲಾಗಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದೆ.
ವಿಶೇಷ ತನಿಖಾ ತಂಡದ ಸದಸ್ಯರು:
ಅಕ್ಷಯ್ ಹಕಾಯ್, ಐಪಿಎಸ್ – ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ಸೆಂಟ್ರಲ್ ಡಿವಿಷನ್
ಲೋಕೇಶ್ ಜಗಲಾಸರ್, ಐಪಿಎಸ್ – ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ದಕ್ಷಿಣ ಡಿವಿಷನ್
ಸುಧೀರ್ – ಸಹಾಯಕ ಪೊಲೀಸ್ ಆಯುಕ್ತ, ಹಲಸೂರು ಗೇಟ್ ಉಪವಿಭಾಗ
ರಾಮಚಂದ್ರ – ಸಹಾಯಕ ಪೊಲೀಸ್ ಆಯುಕ್ತ, ಸಿಸಿಆರ್ಬಿ
ರವಿ ಕೆ.ಬಿ – ಇನ್ಸ್ಪೆಕ್ಟರ್, ಅಶೋಕನಗರ ಪೊಲೀಸ್ ಠಾಣೆ
