ಬೆಂಗಳೂರು,ಮಾ.20- ಬೆಂಗಳೂರು ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಪರಿಷ್ಕೃತ ವ್ಯಾಪಕ ಅಭಿವೃದ್ಧಿ ಮಹಾ ಯೋಜನೆಗೆ 2015ರಲ್ಲಿ ಅನುಮೋದನೆ ನೀಡಲಾಗಿದ್ದು, ಅದರ ಅನ್ವಯ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ತಿನ ಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಂದಾಯ ದಾಖಲಾತಿಗಳಲ್ಲಿ ಕೆರೆ ಎಂದು ನಮೂದಾಗಿ ಪ್ರಸ್ತುತ ಆ ಕೆರೆಯ ಸ್ಥಳದಲ್ಲಿ ಅಭಿವೃದ್ಧಿ ಹೊಂದಿದ್ದರೂ ಮಹಾ ಯೋಜನೆಯ ನಿಯಮದಂತೆ ಕೆರೆಯ ಅಂಚಿನಿಂದ 30 ಮೀಟರ್ ಬಫರ್ ಕಾಯ್ದಿರಿಸಬೇಕಾಗುತ್ತದೆ ಎಂದರು.
ದಶಕಗಳ ಹಿಂದೆ ಬೆಂಗಳೂರು ನಗರದಲ್ಲಿ ಸಿಟಿ ಇಂಪೂಮೆಂಟ್ ಟ್ರಸ್ಟ್ ಬೋರ್ಡ್ ವತಿಯಿಂದ ಕೆಲವೊಂದು ನಿರ್ಜೀವ ಕೆರೆಗಳನ್ನು ಬಳಸಿಕೊಂಡು ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ನಿರ್ಜೀವ ಕೆರೆಗಳಲ್ಲಿ ರಚಿಸಿರುವ ಬಡಾವಣೆಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ಪ್ರಸ್ತುತ ಯಾವುದೇ ಕೆರೆಗಳಲ್ಲಿ ಬಡಾವಣೆಗಳನ್ನು ನಿರ್ಮಿಸುತ್ತಿಲ್ಲ ಎಂದು ಅವರು ಹೇಳಿದರು.
ನಿರ್ಜೀವ ಕೆರೆಗಳೆಂದು ಗುರುತಿಸಿದ್ದು, ಅಂತಹ ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸಿ ಅನುಮೋದನೆಗಾಗಿ ಕಾಯುತ್ತಿರುವ ಯಾವುದಾದರೂ ನಿರ್ದಿಷ್ಟ ಪ್ರಕರಣಳಿದ್ದರೆ ತಮ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನಿರ್ಜೀವ ಕೆರೆಗಳನ್ನು ಗುರುತಿಸಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಅನುಮತಿ ನೀಡುವ ಸಂಬಂಧ ಅರಣ್ಯ ಸಚಿವರು ಹಾಗೂ ತಮನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಬಡಾವಣೆಗಳ ನಿರ್ಮಾಣ ಸೇರಿದಂತೆ ಎಲ್ಲಾ ವಿಚಾರಗಳನ್ನು ಸಮಿತಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಟಿ.ಎ.ಶರವಣ, ಸುಭಾಷ್ ನಗರ, ಹೆಚ್‌ಎಸ್‌ಆರ್ ಲೇಔಟ್ ಸೇರಿದಂತೆ ನಿರ್ಜೀವ ಕೆರೆಗಳ ಅಂಗಳದಲ್ಲಿ ನಿರ್ಮಿಸಿರುವ ಬಡಾವಣೆಗಳನ್ನು ಅನುಮೋದಿಸಲಾಗಿದೆ. ಅದೇ ರೀತಿ ಇತರ ಪ್ರದೇಶಗಳಲ್ಲಿ ನಿರ್ಮಿಸಿರುವ ಬಡಲಾವಣೆಗಳಿಗೂ ಅನುಮೋದನೆ ನೀಡಬೇಕು ಎಂದು ಕೋರಿದರು.