ಬೆಂಗಳೂರು,ಮಾ.20- ಕಬ್ಬನ್ ಉದ್ಯಾನವನದಲ್ಲಿ ಸಾರ್ವತ್ರಿಕ ರಜಾ ದಿನಗಳಂದು ವಾಹನಗಳ ಪ್ರವೇಶಕ್ಕೆ ನಿಷೇಧವಿದ್ದು, ತುರ್ತು ಸೇವೆಯ ಅಗ್ನಿ ಶಾಮಕ ಮತ್ತು ಆಂಬ್ಯುಲೆಲ್ಸ್ ಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಭಾನಾಯಕರು ಹಾಗೂ ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ವಿಧಾನಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅರುಣ ಅವರ ಪ್ರಶ್ನೆಗೆ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪರವಾಗಿ ಉತ್ತರಿಸಿದರು.
ಸಾರ್ವತ್ರಿಕ ರಜಾದಿನಗಳಂದು ಮಕ್ಕಳು, ಸಾರ್ವಜನಿಕರು ಕಬ್ಬನ್ ಉದ್ಯಾನವನಕ್ಕೆ ಬರುತ್ತಾರೆ, ಹೀಗಾಗಿ ಅವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ವಾಹನಗಳನ್ನು ನೀಷೇಧಿಸಲಾಗಿದ್ದು, ರಜಾ ದಿನಗಳಂದು ವಾಹನಗಳ ಪ್ರವೇಶಕ್ಕೆ ಅವಕಾಶ ನೀಡುವ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುತ್ತದೆ ಎಂದರು.
ಪ್ರತಿ ಭಾನುವಾರ ಹಾಗೂ ಪ್ರತಿ ತಿಂಗಳು 2ನೇ ಶನಿವಾರ, 4ನೇ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಸಾರ್ವತ್ರಿಕ ರಜಾದಿನಗಳಂದು ವಾಹನಗಳ ಪ್ರವೇಶಕ್ಕೆ ನಿಷೇಧವಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಸ್ತಾವನೆ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಉಳಿದ ದಿನಗಳಂದು ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗುತ್ತದೆ. ಎಲ್ಲಾ ಶನಿವಾರದಂದು ಸಂಜೆ 6.30 ರಿಂದ ರಾತ್ರಿ 10ರವರೆಗೆ ಕಬ್ಬನ್ ಉದ್ಯಾನವನದಲ್ಲಿ ಹೈ ಕೋರ್ಟ್ ಕಡೆಯಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಹಾಗೂ ಸಿದ್ದಲಿಂಗಯ್ಯ ವೃತ್ತದಿಂದ ಹೈಕೋರ್ಟ್ ಕಡೆಗೆ ಪ್ರವೇಶ ದ್ವಾರ ತೆರೆಯಲಾಗುತ್ತದೆ ಎಂದರು.
ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ ಕಬ್ಬನ್ ಪಾರ್ಕ್ ಹಾವು, ಕಪ್ಪೆಗಳಿವೆ, ಹಾಗಾಗಿ ರಜಾದಿನಗಳಂದು ವಾಹನಗಳಿಗೆ ಅವಕಾಶ ನೀಡದಿರುವುದು ಒಳ್ಳೆಯ ನಿರ್ಧಾರವಾಗಿದೆ ಎಂದು ಹೇಳಿದರು.