ಕೆಜಿಎಫ್, ಮಾ. 26 –ಕಳೆದ ಮೂರು ದಿನಗಳ ಹಿಂದೆ ಹಾಡಹಗಲೇ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು 48 ಗಂಟೆಯೊಳಗಾಗಿ ಬಂಧಿಸುವಲ್ಲಿ ವಿಶೇಷ ಅಪರಾಧ ಪತ್ತೆ ತಂಡದ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಜಿಎಫ್ ಮಾರಿಕುಪ್ಪಂ ಪ್ರದೇಶದ ಅಡಿಷನಲ್ ರಿವಿಟರ್ಸ್ ಲೈನ್ ನ ನಿವಾಸಿ ಶಿವಕುಮಾರ್ ತೇನ್ (30) ಎಂಬಾತನನ್ನು ಕೆಜಿಎಫ್- ಕಾಮಸಮುದ್ರಂ ಮುಖ್ಯ ರಸ್ತೆಯಲ್ಲಿನ ಬಿಸಾನತ್ತಂ ಕ್ರಾಸ್ ಸಮೀಪ ಪ್ರೇಮದ ವಿಚಾರವಾಗಿ ದುಷ್ಕರ್ಮಿಗಳು ಮಾ. 23 ರಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಆರೋಪಿಗಳನ್ನು ಪತ್ತೆ ಮಾಡಲು ಡಿವೈಎಸ್‌ಪಿ ಎಸ್.ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ಉರಿಗಾಂ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಟಿ. ಮಾರ್ಕೊಂಡಯ್ಯ ಅವರ ನೇತೃತ್ವದಲ್ಲಿ ಕಾಮಸಮುದ್ರಂ ಪಿಎಸ್‌ಐ ಕಿರಣ್ ಕುಮಾರ್ ಮತ್ತು ಆಂಡ್ರಸನ್‌ಪೇಟೆ ಪಿಎಸ್‌ಐ ಬಿ.ಮಂಜುನಾಥ
ಅವರುಗಳನ್ನೊಳಗೊಂಡ ವಿಶೇಷ ಅಪರಾಧ ಪತ್ತೆ ತಂಡವನ್ನು ಪ್ರತ್ಯೇಕವಾಗಿ ರಚಿಸಲಾಗಿತ್ತು.
ಈ ತಂಡದವರು ಕ್ಷಿಪ್ರವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾನೂನು ಸಂಘರ್ಷಕ್ಕೊಳಗಾದ 17 ವರ್ಷದ ಅಪ್ರಾಪ್ತ ವಯಸ್ಸಿನ ಯುವತಿ ಹಾಗೂ ಇಬ್ಬರು ಯುವಕರು ಮತ್ತು ಆರೋಪಿ ಚಾಂಪಿಯನ್ ರೀಫ್ಟ್ ನಿವಾಸಿ ದೀಪಕ್ (19) ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತರಾಗಿರುವ ಅಪ್ರಾಪ್ತ ಯುವತಿ ಮತ್ತು ಶಿವಕುಮಾರ್ ತೇನ್ ಇವರಿಬ್ಬರ ಮದುವೆ ಮಾಡಿಸಲು ಹಿರಿಯರು ನಿಶ್ಚಯಿಸಿದ್ದು, ಈ ಮದ್ಯೆ ಯುವತಿ ಮತ್ತು ಈ ಪ್ರಕರಣದ ಯುವಕನ ನಡುವೆ ಪರಸ್ಪರ ಆಕರ್ಷಣೆ ಉಂಟಾಗಿದ ಹಿನ್ನೆಲೆಯಲ್ಲಿ ಶಿವಕುಮಾರ್ ತೇನ್‌ನನ್ನು ಯುವತಿಯ ಸಹಕಾರದಿಂದ ಇತರೆ ಮೂವರೊಂದಿಗೆ ಸೇರಿ ಸಂಚು ರೂಪಿಸಿ ಕೊಲೆಗೈದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆಂಡ್ರಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ರಾಬರ್ಟ್‌ನ್‌ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ತನಿಖೆ ಮುಂದುವರೆಸಿದ್ದಾರೆ. ವಿಶೇಷ ಅಪರಾಧ ಪತ್ತೆ ತಂಡದ ಉರಿಗಾಂ ಸಿಪಿಐ ಮಾರ್ಕೊಂಡಯ್ಯ, ಆಂಡ್ರಸನ್‌ಪೇಟೆ ಪಿಎಸ್‌ಐ ಬಿ.ಮಂಜುನಾಥ, ಕಾಮಸಮುದ್ರಂ ಪಿಎಸ್‌ಐ ಕಿರಣ್ ಕುಮಾರ್, ಎಎಸ್‌ಐ ಶಂಕರ್, ಸಿಬ್ಬಂದಿಗಳಾದ ಜಬೀರ್‌ಪಾಷ, ರಮೇಶ್ ಜಂಬಗಿ, ಮಂಜುನಾಥ ಉಳ್ಳಾಗಡ್ಡಿ. ಸುನಿಲ್ ಕುಮಾರ್ , ಗೋಪಿ, ವೆಂಕಟೇಶ್, ಲೋಕೇಶ್, ಮಂಜುನಾಥರೆಡ್ಡಿ, ಅನಿಲ್‌ಕುಮಾರ್. ಮುನಾವರ್ ಪಾಷ, ರಾಮಕೃಷ್ಣಾರೆಡ್ಡಿ, ಮಂಜುನಾಥ, ಲಕ್ಷ್ಮಣತೇಲಿ ಅವರುಗಳ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಶ್ಲಾಘಿಸಿದ್ದಾರೆ.