ಹೈದರಾಬಾದ್, ಮಾ. 26: ಬರುವ ಮೇ ತಿಂಗಳಲ್ಲಿ ತೆಲಂಗಾಣದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯಲಿದೆ. ವಿಶ್ವಸುಂದರಿ ಸ್ಪರ್ಧೆ ಆಯೋಜನೆಯಿಂದ ರಾಜ್ಯವನ್ನು ಜಾಗತಿಕವಾಗಿ ಪ್ರವಾಸೋದ್ಯಮ ತಾಣವಾಗಿ ಉತ್ತೇಜಿಸಲಿದೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ತೆಲಂಗಾಣ ಪ್ರವಾಸೋದ್ಯಮ ಸಚಿವ ಜುಪಲ್ಲಿ ಕೃಷ್ಣ ರಾವ್ ಹೇಳಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಅನುದಾನದ ಬೇಡಿಕೆಗಳ ಮತದಾನದ ಮೇಲಿನ ಒಂದು ದಿನದ ಚರ್ಚೆಗೆ ಉತ್ತರಿಸಿದ ಸಚಿವರು. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಯುಕೆಗೆ ಭೇಟಿ ನೀಡಿದಾಗ, ತೆಲಂಗಾಣ ಎಲ್ಲಿದೆ ಎಂದು ಕೇಳಲಾಯಿತು ಎಂದು ಹೇಳಿದರು.
ವಿಶ್ವದ ಅನೇಕ ದೇಶಗಳಿಗೆ ತೆಲಂಗಾಣದ ಬಗ್ಗೆ ತಿಳಿದಿಲ್ಲ. ತೆಲಂಗಾಣದ ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸಲು ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸಲು ಮಿಸ್ ವರ್ಲ್ಡ್ ಸ್ಪರ್ಧೆಯ ಲಾಭವನ್ನು ಪಡೆಯುವುದು ಯೋಜನೆಯ ಉದ್ದೇಶವಾಗಿದೆ ಎಂದು ರಾವ್ ಹೇಳಿದರು.
ಈ ಕಾರ್ಯಕ್ರಮದಲ್ಲಿ 120-140 ದೇಶಗಳ ಪ್ರತಿನಿಧಿಗಳು ಮತ್ತು ಸುಮಾರು 3.500 ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ಮಾದರಿಯಲ್ಲಿ ಹೈದರಾಬಾದ್‌ನಲ್ಲಿ 20,000 ಜನರ ಸಾಮರ್ಥ್ಯದ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಯೋಜಿಸಿದೆ ಮತ್ತು ಹೈದರಾಬಾದ್ ಕಾರ್ನಿವಲ್ ಅನ್ನು ಆಯೋಜಿಸಲು ಯೋಜಿಸಿದೆ ಎಂದು ಅವರು ಮಾಹಿತಿ ನೀಡಿದರು.