ಬೆಂಗಳೂರು,ಮಾ.26- ನಡತೆ ಬಗ್ಗೆ ಸಂಶಯಗೊಂಡು ಪತ್ನಿಯೊಂದಿಗೆ ಜಗಳವಾಡಿದ ಪತಿ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹೆಗಡೆನಗರದ 1ನೇ ಮುಖ್ಯರಸ್ತೆ ನಿವಾಸಿ ವಲ್ಲರಮತಿ(35) ಕೊಲೆಯಾದ ನತದೃಷ್ಟೆ. ಹದಿಮೂರು ವರ್ಷದ ಹಿಂದೆ ಮೂಲತಃ ತಮಿಳುನಾಡಿನವರಾದ ವಲ್ಲರ ಮತಿ ಹಾಗೂ ಚಂದ್ರಶೇಖರ್ ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ.
ವಲ್ಲರಮತಿ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ವೃತ್ತಿ ಮಾಡುತ್ತಿದ್ದರು. ಪತಿ ಚಂದ್ರಶೇಖರ್ ಕ್ಯಾಬ್ ಚಾಲಕ.ಈ ನಡುವೆ ಪತ್ನಿ ನಡತೆ ಬಗ್ಗೆ ಚಂದ್ರಶೇಖರ್ ಅನುಮಾನಗೊಂಡು ಆಗಾಗ್ಗೆ ಜಗಳವಾಡುತ್ತಿದ್ದನು. ನಿನ್ನೆ ಬೆಳಗ್ಗೆ ಮಕ್ಕಳು ಎಂದಿನಂತೆ ಶಾಲೆಗೆ ಹೋಗಿದ್ದಾರೆ. 9.30ರ ಸುಮಾರಿನಲ್ಲಿ ವಲ್ಲರಮತಿ ಕೆಲಸಕ್ಕೆ ಹೋಗಲು ರೆಡಿಯಾಗುತ್ತಿದ್ದರು.
ಆ ಸಂದರ್ಭದಲ್ಲಿ ಪತ್ನಿಯೊಂದಿಗೆ ಅದೇ ವಿಚಾರವಾಗಿ ಜಗಳವಾಡಿದ ಪತಿ ಕೋಪದಲ್ಲಿ ಕುತ್ತಿಗೆ ಹಿಸುಕಿ ಕೊಲೆಮಾಡಿ ನಂತರ ಆತನೇ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿ ಚಂದ್ರಶೇಖರನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.