ಗಾಜಿಯಾಬಾದ್, ಮಾ. 28: ಇಲ್ಲಿನ ಭೋಜ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪೇಪರ್ ಮಿಲ್ ನಲ್ಲಿ ಬಾಯರ್ ಸ್ಪೋಟಗೊಂಡು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಕಾರ್ಮಿಕರು ಗಿರಣಿಯಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಇದ್ದಕ್ಕಿದ್ದಂತೆ ಬಾಯರ್ ಸ್ಪೋಟಗೊಂಡಿದ್ದರಿಂದ ಮೂವರು ಕಾರ್ಮಿಕರು ಗಾಳಿಯಲ್ಲಿ ಹಾರಿ 50 ಅಡಿ ದೂರಕ್ಕೆ ಬಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಳಿದ ಕಾರ್ಮಿಕರಿಗೆ ತೀವ್ರ ಗಾಯಗಳಾಗಿದ್ದು, ಅವರ ದೇಹದ ಭಾಗಗಳು ಸುಟ್ಟಿ ಹೋಗಿವೆ ಎಂದು ಮೂಲಗಳು ತಿಳಿಸಿವೆ.
ಮೃತರನ್ನು ಯೋಗೇಂದ್ರ, ಅನುಜ್ ಮತ್ತು ಅವಧೇಶ್ ಎಂದು ಗುರುತಿಸಲಾಗಿದೆ. ಅವರ ವಯಸ್ಸ ನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಕಾರ್ಖಾನೆಯ ಮಾಲೀಕ ಅವೀಶ್ ಮೋದಿನಗರದಲ್ಲಿ ವಾಸವಾಗಿದ್ದಾರೆ ಎಂದು ಗ್ರಾಮೀಣ ಡಿಸಿಪಿ ಸುರೇಂದ್ರ ನಾಥ್ ತಿವಾರಿ ತಿಳಿಸಿದ್ದಾರೆ.
ಗಿರಣಿಯು ಲ್ಯಾಮಿನೇಷನ್ ಪೇಪರ್ ಅನ್ನು ತಯಾರಿಸುತ್ತದೆ. ಮೃತ ಕೂಲಿಗಾರರ ಕುಟುಂಬ ಸದಸ್ಯರು ಸ್ಥಳಕ್ಕೆ ತಲುಪಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿವಾರಿ ಹೇಳಿದರು.