ಹೈದರಾಬಾದ್, ಮಾ.28: ಭಾರತದಲ್ಲಿ ಎಲೆಕ್ಟಿಕ್ ವಾಹನ ತಯಾರಿಕೆಯ ಘಟಕ ಸ್ಥಾಪಿಸಲು ಇಲಾನ್ಸ್ ಮಸ್ಕ್ ಅವರ ಟೆಸ್ಲಾ ಕಂಪನಿ ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲೇ ವಿಶ್ವದ ನಂಬರ್ ಒನ್ ಎಲೆಕ್ಟಿಕ್ ಕಾರ್ ಕಂಪನಿ ಬಿವೈಡಿ ಸದ್ದಿಲ್ಲದೆ ಭಾರತಕ್ಕೆ ಬರಲು ಅಣಿಯಾಗಿದೆ.
ವರದಿ ಪ್ರಕಾರ ಹೈದರಾಬಾದ್ ಬಳಿ ಬಿವೈಡಿ ಇವಿ ತಯಾರಕ ಘಟಕ ಸ್ಥಾಪಿಸಬಹುದು ಎನ್ನಲಾಗಿದ್ದು, ತೆಲಂಗಾಣ ಸರ್ಕಾರದ ಜೊತೆ ಬಿವೈಡಿ ಕಂಪನಿ ಅಧಿಕಾರಿಗಳು ಸುದೀರ್ಘ ಮಾತುಕತೆ ನಡೆಸುತ್ತಿದ್ದಾರೆ.
ಕಂಪನಿಗೆ ಜಮೀನು ಒದಗಿಸುವುದು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಉತ್ಸುಕವಾಗಿರುವುದು ತಿಳಿದುಬಂದಿದೆ. ತೆಲಂಗಾಣ ಸರ್ಕಾರ ಬಿವೈಡಿಯ ಇವಿ ಘಟಕ ಸ್ಥಾಪನೆಗೆ ಮೂರು ಜಾಗಗಳನ್ನು ಆಫರ್ ಮಾಡಿದೆ. ಈ ಮೂರೂ ಕೂಡ ಹೈದರಾಬಾದ್ ಸಮೀಪವೇ ಇದೆ. ಬಿವೈಡಿ ಅಧಿಕಾರಿಗಳು ಯಾವುದಾದರೂ ಒಂದು ಜಾಗವನ್ನು ಅಂತಿಮಗೊಳಿಸಿದ ಬಳಿಕ ತೆಲಂಗಾಣ ಸರ್ಕಾರ ಮತ್ತು ಬಿವೈಡಿ ಮಧ್ಯೆ ಒಪ್ಪಂದ ಆಗಬಹುದು.
ಬಿವೈಡಿಗೆ ಭಾರತದಲ್ಲಿ ಇದು ಮೊದಲ ಫ್ಯಾಕ್ಟರಿಯಾಗುತ್ತದೆ. ಬಿವೈಡಿ ಘಟಕ ಸ್ಥಾಪನೆಯಾದರೆ, ಅದರ ಸರಬರಾಜು ಸರಪಳಿಯಲ್ಲಿರುವ ಇತರ ಹಲವು ಬಿಡಿಭಾಗ ತಯಾರಕ ಕಂಪನಿಗಳೂ ಕೂಡ ಹೈದರಾಬಾದ್ ಸಮೀಪವೇ ಘಟಕಗಳನ್ನು ಸ್ಥಾಪಿಸುವ ಸಾಧ್ಯತೆ ಹೆಚ್ಚು.
ಒಂದು ರೀತಿಯಲ್ಲಿ ಹೈದರಾಬಾದ್‌ನಲ್ಲಿ ಆಟೊ ಸೆಕ್ಟರ್‌ನ ಪ್ರಮುಖ ಕ್ಲಸ್ಟರ್ ಆಗಿ ಪರಿವರ್ತನೆಗೊಂಡಿದೆ. ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಇವಿ ಕಂಪನಿ ಚೀನಾದಲ್ಲಿ ಕಾರು ತಯಾರಕಾ ಘಟಕ ಸ್ಥಾಪಿಸಿ, ಕೆಲ ವರ್ಷ ಕಾಲ ಇವಿ ಮಾರುಕಟ್ಟೆಯ ಕಿಂಗ್ ಎನಿಸಿತ್ತು.
ಈಗ ಕೆಲ ವರ್ಷಗಳಿಂದ ಚೀನೀ ಕಂಪನಿಗಳು ಇವಿ ಸೆಕ್ಟರ್‌ನಲ್ಲಿ ಮುಂಚೂಣಿಗೆ ಬಂದಿವೆ. ಅದರಲ್ಲೂ ಬಿವೈಡಿ ನಂಬರ್ ಒನ್ ಎನಿಸಿದೆ. ಚೀನಾದ ಇವಿ ಮಾರುಕಟ್ಟೆಯಲ್ಲಿ ಟೆಸ್ಲಾ ಮೂರನೇ ಸ್ಥಾನಕ್ಕೋ, ನಾಲ್ಕನೇ ಸ್ಥಾನಕ್ಕೋ ಹೋಗಿದೆ. ಚೀನಾದ ಇವಿ ಮಾರುಕಟ್ಟೆಯಲ್ಲಿ ಚೀನೀ ಕಂಪನಿಗಳೊಂದಿಗೆ ಪೈಪೋಟಿ ಆಗಲ್ಲ ಎಂದು ಮಸ್ಕ್ ಅವರೇ ಸ್ವತಃ ಹತಾಶೆ ತೋಡಿಕೊಂಡಿದ್ದುಂಟು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಟೆಸ್ಲಾ ಕಂಪನಿ ಭಾರತದಲ್ಲಿ ಮ್ಯಾನುಫ್ಯಾಕ್ಟರಿಂಗ್ ಯುನಿಟ್ ಇಷ್ಟರಲ್ಲೇ ಸ್ಥಾಪನೆಯಾಗಬೇಕಿತ್ತು. ಚೀನಾದ ಇವಿ ಮಾರುಕಟ್ಟೆ ಈಗ ಬಹುತೇಕ ನಿಂತ ನೀರಾಗಿರುವುದರಿಂದ ಭಾರತದ ಮಾರುಕಟ್ಟೆ ಪ್ರವೇಶಿಸಲು ಟೆಸ್ಲಾಗೆ ಸರಿಯಾದ ಸಂದರ್ಭ ಇದು. ಆದರೂ ಅವರು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲೇ ಬಿವೈಡಿ ಸಂಸ್ಥೆ ಭಾರತಕ್ಕೆ ಲಗ್ಗೆ ಇಟ್ಟಿದೆ)