Saturday, April 5, 2025
Homeರಾಜ್ಯಸಚಿವ ರಾಜಣ್ಣ ಪುತ್ರನ ಕೊಲೆಗೆ ಸಂಚು, ಸ್ಪೋಟಕ ಆಡಿಯೋ ಬಹಿರಂಗ..!

ಸಚಿವ ರಾಜಣ್ಣ ಪುತ್ರನ ಕೊಲೆಗೆ ಸಂಚು, ಸ್ಪೋಟಕ ಆಡಿಯೋ ಬಹಿರಂಗ..!

Conspiracy to kill Minister Rajanna's son, explosive audio revealed

ಬೆಂಗಳೂರು,ಮಾ.31- ಸಹಕಾರ ಸಚಿವ ರಾಜಣ್ಣ ಅವರ ಪುತ್ರ ಹಾಗೂ ವಿಧಾನಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಕೊಲೆ ಯತ್ನಕ್ಕೆ ರೂಪಿಸಲಾಗಿದ್ದ ಸಂಚಿನ ಮಾಹಿತಿಯುಳ್ಳ ಆಡಿಯೋವೊಂದು ಬಹಿರಂಗವಾಗಿದ್ದು, ಹಲವಾರು ಮಾಹಿತಿಗಳನ್ನು ಹೊರಹಾಕಿದೆ.

ರಾಜೇಂದ್ರ ಅವರ ಬೆಂಬಲಿಗ ರಾಖಿ ಹಾಗೂ ಸಂಚಿನ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾದ ಪುಷ್ಪ ಅವರ ನಡುವಿನ ಸಂಭಾಷಣೆಯ ಆಡಿಯೋ ಈಗ ಬಿಡುಗಡೆಯಾಗಿದೆ.
ನವೆಂಬರ್‌ನಲ್ಲಿ ರಾಜೇಂದ್ರ ಅವರ ಪುತ್ರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಕೊಲೆಗೆ ತುಮಕೂರಿನ ಸೋಮ ಎಂಬಾತ ಸಂಚು ನಡೆಸಿ ತುಮಕೂರಿನ ಜಯಪುರದ ಇಬ್ಬರು ಹುಡುಗರನ್ನು ಮನೆಗೆ ಕಳುಹಿಸಿದ್ದಾಗಿ ತಿಳಿಸಲಾಗಿದೆ.

ಸೋಮ ಅವರ ಖಾತೆಗೆ ಈಗಾಗಲೇ 5 ಲಕ್ಷ ರೂ. ಹಣ ಸಂದಾಯವಾಗಿದೆ.
ಆತನ ಮೇಲೆ ನಿಗಾ ವಹಿಸಬೇಕು, ತನಿಖೆ ಮಾಡಿಸಬೇಕು ಎಂದು ಮಹಿಳೆ ಫೋನ್‌ ಸಂಭಾಷನೆಯಲ್ಲಿ ಸಲಹೆ ನೀಡಿದ್ದಾರೆ.ಕಾರ್ಪೆಂಟರ್‌ ಮನು ಎಂಬಾತನ ಖಾತೆಗೆ ಹಣ ಹಾಕಿಸಿಕೊಂಡು ಅಲ್ಲಿಂದ ನಗದು ರೂಪದಲ್ಲಿ ಸೋಮ ಪಡೆದುಕೊಳ್ಳುತ್ತಾನೆ. ಪರ್ಷಿ ಎಂಬಾತನ ಕೊಲೆಗೂ ಸೋಮ ಸಂಚು ರೂಪಿಸಿದ್ದಾನೆ. ಮಧುಗಿರಿಯ ಏಳೆಂಟು ಹುಡುಗರು ಬೆಂಗಳೂರಿನ ಕಲಾಸಿಪಾಳ್ಯದ ಇಬ್ಬರು ತಮಿಳಿಗರನ್ನು ಒಟ್ಟುಗೂಡಿಸಿ ರಾಜೇಂದ್ರ ಅವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಮಹಿಳೆ ರಾಖಿಗೆ ತಿಳಿಸಿದ್ದಾರೆ.

ರಾಜೇಂದ್ರ ಅವರ ಜೊತೆಯಲ್ಲಿದ್ದವರನ್ನು ಮಾಹಿತಿದಾರರನ್ನಾಗಿ ಬಳಸಿಕೊಳ್ಳಲಾಗುತ್ತದೆ. ಗುಂಡ ಎಂಬಾತನನ್ನು ಪೆರೋಲ್‌ ಮೇಲೆ ಜೈಲಿನಿಂದ ಕರೆಸಿ ಕೊಲೆಗೆ ಪ್ರೇರೇಪಣೆ ನೀಡಲಾಗಿದೆ. ಶಿರಾ ಗೇಟ್‌ನ ದೀಪು, ಒಂಟಿಸಲಗ, ಭರತ, ಸೂಫಿ ಎಂಬುವರು ಎಲ್ಲರೂ ಒಟ್ಟಾಗಿ ಸೇರಿದ್ದಾರೆ.

ತಾನು ಆಟೋದಲ್ಲಿ ಪ್ರಯಾಣಿಸುವಾಗ ಅಲ್ಲಿದ್ದ ಕೆಲ ಹುಡುಗರು ರಾಜೇಂದ್ರ ಅವರ ಹತ್ಯೆಗೆ ಇಂದು ಸಂಚು ನಡೆದಿದೆ. ನಮ ಬಳಿ ಎಣ್ಣೆ ಬಾಟಲಿಗಳಿವೆ. ನೀವು ಫಿಶ್‌ ಮತ್ತು ಕಬಾಬು ತೆಗೆದುಕೊಂಡು ಬನ್ನಿ ಎಂದು ಹೇಳುವುದನ್ನು ಕೇಳಿಸಿಕೊಂಡೇ, ಅಲ್ಲಿಂದ ಸೋಮ ಅವರ ಗುಂಪನ್ನು ಹಿಂಬಾಲಿಸಿದಾಗ ಒಂದೊಂದೇ ಮಾಹಿತಿಗಳು ಹೊರಬಂದಿವೆ ಎಂದು ಆಕೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಹನಿಟ್ರ್ಯಾಪ್‌ ಹಾಗೂ ರಾಜೇಂದ್ರ ರಾಜಣ್ಣ ಅವರ ಕೊಲೆ ಯತ್ನದ ಸಂಚು ಭಾರೀ ಸಂಚಲನ ಮೂಡಿಸಿದೆ.
ಈ ಬಗ್ಗೆ ರಾಜೇಂದ್ರ ಪೊಲೀಸ್‌‍ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಜೊತೆಗೆ ತುಮಕೂರು ಜಿಲ್ಲೆಯ ಪೊಲೀಸ್‌‍ ಮುಖ್ಯಾಧಿಕಾರಿಗೂ ದೂರು ಸಲ್ಲಿಕೆಯಾಗಿದ್ದು, ತನಿಖೆ ಆರಂಭಗೊಂಡಿದೆ.
ಪೊಲೀಸರು ಆಡಿಯೋದಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾದ ಮಹಿಳೆಯನ್ನು ವಿಚಾರಣೆಗೊಳಪಡಿಸಿದ್ದಾರೆ. ಸೋಮ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ.

ತೀವ್ರಗೊಂಡ ವಿಚಾರಣೆ : ಮಹಿಳೆ ಸೇರಿ ಮೂವರ ವಶ..
ವಿಧಾನಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಅವರ ಕೊಲೆ ಯತ್ನ ಪ್ರಕರಣದ ತನಿಖೆ ಮುಂದುವರೆದಿದ್ದು, ಆಡಿಯೋದಲ್ಲಿ ಮಾಹಿತಿ ನೀಡಿರುವ ಮಹಿಳೆ ಸೇರಿದಂತೆ ಮೂವರನ್ನು ತನಿಖಾ ತಂಡಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿವೆ.

ಗಂಭೀರ ಚರ್ಚೆಗೆ ಗ್ರಾಸವಾಗಿದ್ದ ಕೊಲೆಯತ್ನ ಪ್ರಕರಣವನ್ನು ಮಧುಗಿರಿ ಉಪವಿಭಾಗದ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ತನಿಖಾ ತಂಡಕ್ಕೆ ಮಾಗಡಿ ಉಪವಿಭಾಗದ ಡಿವೈಎಸ್ಪಿಯವರನ್ನು ಹೊಸದಾಗಿ ಸೇರಿಸಲಾಗಿದೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು ನಾನಾ ತಿರುವುಗಳಿಗೂ ಕಾರಣವಾಗಿದೆ.

70 ಲಕ್ಷ ರೂ. ಸುಪಾರಿ ನೀಡಿ ರಾಜೇಂದ್ರ ರಾಜಣ್ಣ ಅವರನ್ನು ಅವರ ಮನೆಯಲ್ಲೇ ಕೊಲೆ ಮಾಡುವ ಸಂಚು ನಡೆದಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೂ ಸವಾಲೊಡ್ಡಿತ್ತು. ಈ ಹಿನ್ನೆಲೆಯಲ್ಲಿ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ.ಮೂಲಗಳ ಪ್ರಕಾರ ಇಡೀ ಪ್ರಕರಣದ ಮೂಲ ಎಂದು ಭಾವಿಸಲಾಗಿರುವ ಆಡಿಯೋ ಮಹಿಳೆ ಪುಷ್ಪ ಪೊಲೀಸರ ತನಿಖೆಗೊಳಪಟ್ಟಿದ್ದಾರೆ. ಜೊತೆಗೆ ಆಕೆ ಜೊತೆ ಮಾತನಾಡಿರುವ ವ್ಯಕ್ತಿ ಮತ್ತು ಆಡಿಯೋದಲ್ಲಿ ಹೆಸರಿಸಲಾಗಿರುವ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರ ಹಿಂದೆ ಯಾರ ಕೈವಾಡ ಇದೆ, ಯಾರೆಲ್ಲಾ ಸಂಚಿನ ಭಾಗವಾಗಿದ್ದಾರೆ ಎಂಬ ಮಾಹಿತಿಯನ್ನು ತನಿಖಾ ತಂಡಗಳು ಕಲೆ ಹಾಕುತ್ತಿವೆ.

ಸಹಕಾರ ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್‌ ಯತ್ನ ಪ್ರಕರಣಕ್ಕೂ, ಈ ಘಟನೆಗೂ ಸಂಬಂಧ ಇದೆಯೇ ಎಂಬುದನ್ನು ಕೂಡ ತನಿಖಾ ತಂಡಗಳು ಪರಿಶೀಲನೆ ನಡೆಸುತ್ತಿವೆ.ಆಡಿಯೋದಲ್ಲಿ ಹೆಸರಿಸಲಾದ ಜಯಪುರದ ಸೋಮ ರಾಜಕೀಯ ಆಕಾಂಕ್ಷಿಯಾಗಿದ್ದು, ಮುಂದೆ ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದ ಎಂದು ಹೇಳಲಾಗಿದೆ. ಆಡಿಯೋ ಬಹಿರಂಗವಾಗುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ರಾಜಣ್ಣ ಅವರ ಹನಿಟ್ರ್ಯಾಪ್‌ ಯತ್ನ ಪ್ರಕರಣದಲ್ಲಿ ಸಿಐಡಿ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕೊಲೆ ಯತ್ನ ಪ್ರಕರಣದ ತನಿಖೆ ಇನ್ನೂ ಮುಂದುವರೆಯುತ್ತಿದೆ.
ಪ್ರಕರಣದ ಬಗ್ಗೆ ನಾನಾ ರೀತಿಯ ವದಂತಿಗಳು ಕೇಳಿಬರಲಾರಂಭಿಸಿವೆ. ರಾಜಕೀಯ ವರ್ಚಸ್ಸು ಹಾಳಾಗುವುದನ್ನು ಮರೆಮಾಚಲು ಈ ರೀತಿಯ ಗೊಂದಲಗಳನ್ನು ಹುಟ್ಟುಹಾಕಲಾಗಿದೆ. ಇದರ ಹಿಂದೆ ಬೇರೆ ರೀತಿಯ ಸ್ವರೂಪಗಳಿವೆ ಎಂದು ಹೇಳಲಾಗುತ್ತಿದೆ.

RELATED ARTICLES

Latest News