ಹಾಸನ,ಏ.3- ಸರ್ಕಾರದ ಆದೇಶದಂತೆ ಹಾಲಿನ ದರ ನಾಲ್ಕು ರೂ. ಹೆಚ್ಚಳ ಮಾಡುವುದರಿಂದ ಹಾಸನ ಹಾಲು ಒಕ್ಕೂಟಕ್ಕೆ ಪ್ರತಿದಿನ 36 ಲಕ್ಷ ನಷ್ಟ ಉಂಟಾಗಲಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ .ರೇವಣ್ಣ ತಿಳಿಸಿದರು.
ನಗರದ ಹಾಸನ ಹಾಲು ಒಕ್ಕೂಟದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಲಿನ ದರವನ್ನು ನಾಲ್ಕು ರೂ. ಹೆಚ್ಚಳ ಮಾಡಿದೆ. ಈಗಾಗಲೇ ನಮ್ಮ ಒಕ್ಕೂಟಕ್ಕೆ ಹಾಲಿನ ದರೆ ಹೆಚ್ಚಳ ಮಾಡುವಂತೆ ಪತ್ರವನ್ನು ಸಹ ಕಳುಹಿಸಿದ್ದಾರೆ. ಸಿಎಂ ಆದೇಶವನ್ನು ನಾವು ಸಹ ಪಾಲಿಸಬೇಕಾಗುತ್ತದೆ ಎಂದರು.
ಹಾಲಿನ ದರ ಹೆಚ್ಚಳ ಮಾಡುವುದರಿಂದ ಹಾಸನ ಹಾಲು ಒಕ್ಕೂಟಕ್ಕೆ ಆಗುವಂತಹ ನಷ್ಟದ ಪರಿಸ್ಥಿತಿಯನ್ನು ಮುಖ್ಯಮಂತ್ರಿ, ಸರ್ಕಾರದ ಕಾರ್ಯದರ್ಶಿ, ಸಂಬಂಧಪಟ್ಟ ಸಚಿವರು ಹಾಗೂ ಕೆಎಂಎಫ್‌ಗೆ 2 ಬಾರಿ ಪತ್ರ ಬರೆದಿದ್ದೇನೆ ಅದರೂ ಸಹ ದರ ಏರಿಕೆಯನ್ನು ಮಾಡಲಾಗಿ ದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಸನ ಹಾಲು ಒಕ್ಕೂಟಕ್ಕೆ ಪ್ರತಿದಿನ 12,58,000 ಲೀಟರ್ ಹಾಲು ಬರುತ್ತಿದೆ ಬೇಸಿಗೆ ಕಳೆದರೆ ಮತ್ತೆ.2.50 ಲಕ್ಷ ಲೀಟರ್ ಹಾಲು ಹೆಚ್ಚಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕಮಗಳೂರು, ಹಾಸನ ಕೊಡಗು ಜಿಲ್ಲೆಯಲ್ಲಿ ನಿತ್ಯ 1,98,000 ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದೇವೆ ಎಂದರು.
ಪ್ರತಿದಿನ 1,20,000 ಲೀಟರ್ ಮೊಸರು ಸೇರಿದಂತೆ 3,18,000 ಲೀಟರ್ ಹಾಲು ಮತ್ತು ಮೊಸರನ್ನು ಒಕ್ಕೂಟದಿಂದ ಮಾರಾಟ ಮಾಡಲಾಗುತ್ತಿದ್ದು 9,40,000 ಲೀಟರ್ ಹಾಲು ಉಳಿಕೆಯಾಗುತ್ತಿದೆ. ಸರ್ಕಾರ 4 ರೂ. ಏರಿಸಿದರೆ ಒಂದು ತಿಂಗಳಿಗೆ 9 ಕೋಟಿ ನಷ್ಟ ವಾಗುತ್ತಿದೆ ಎಂದರು.
ಒಕ್ಕೂಟದಲ್ಲಿ ಸದ್ಯ 5 ಕೋಟಿ ಲಾಭಾಂಶವಿದ್ದು ಆ ಹಣ ಖಾಲಿಯಾಗುವವರೆಗೂ ಸರ್ಕಾರದ ಆದೇಶವನ್ನು ಪಾಲಿಸಲಾಗುವುದು ನಂತರ ಸಾಮಾನ್ಯ ಸಭೆ ಕರೆದು ರೈತರ ಹಾಗೂ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ಕಾರಕ್ಕೆ ಮತ್ತೊಮ್ಮೆ ವಸ್ತು ಸ್ಥಿತಿಯನ್ನು ತಿಳಿಸಲಾಗುವುದು ಎಂದರು.
ಒಂದು ಸಂಸ್ಥೆ ಕಟ್ಟುವುದು ಅಷ್ಟು ಸುಲಭವಲ್ಲ ಕಟ್ಟಿರುವುದನ್ನು ಉಳಿಸಬೇಕಾಗುತ್ತದೆ. ಮುಖ್ಯಮಂತ್ರಿಗಳ ಮಾತಿಗೆ ಗೌರವ ಕೊಟ್ಟು ನಾಲ್ಕು ರೂ. ಹೆಚ್ಚಳ ಮಾಡಿದ್ದೇವೆ. ಮುಂದೆ ಹಾಸನ ಹಾಲು ಒಕ್ಕೂಟ ನಷ್ಟ ಉಂಟಾದರೆ ಕೆಎಂಎಫ್ ಹಾಗೂ ಸರ್ಕಾರವೇ ಭರಿಸಬೇಕಾಗುತ್ತದೆ. ತಿಂಗಳಿಗೆ 9 ಕೋಟಿ ನಷ್ಟ ಮಾಡಿಕೊಂಡು ಹಾಲು ಮಾರಾಟ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿಗಳು ಕರೆದಂತಹ ಸಭೆಯಲ್ಲಿ ಹಾಲಿನ ದರ 3 ರೂ. ಹೆಚ್ಚಳ ಹಾಗೂ 50 ಪೈಸ ಒಕ್ಕೂಟಕ್ಕೆ ನೀಡುವಂತೆ ಮಾತುಕತೆಯಾಗಿತ್ತು ಆದರೆ ಕೆಲವರು ನಾಲ್ಕು ರೂಪಾಯಿ ಹೆಚ್ಚಳ ಮಾಡುವಂತೆ ಒತ್ತಡ ಬರಿದ್ದಾರೆ ಎಂದು ಆರೋಪಿಸಿದರು.
ನಾನು ಒಕ್ಕೂಟದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಖಾಸಗಿ ಹಾಲು ಉತ್ಪಾದಕರಿಗೆ ಕಡಿವಾಣ ಹಾಕಿದ್ದೆ ಆದರೆ ಸರ್ಕಾರದ ಇಂತಹ ನಿರ್ಧಾರಗಳಿಂದ ಕೆಎಂಎಫೈ ಮುಂದಿನ ದಿನಗಳಲ್ಲಿ ತೊಂದರೆ ಆಗಲಿದೆ. ಮುಂದಿನ 10 ತಿಂಗಳಲ್ಲಿ 90 ಕೋಟಿ ಹಾಸನ ಹಾಲು ಒಕ್ಕೂಟಕ್ಕೆ ನಷ್ಟ ಉಂಟಾಗಲಿದ್ದು ಸಹಕಾರ ಸಚಿವ ರಾಜಣ್ಣ, ಮುಖ್ಯಮಂತ್ರಿ ಸೇರಿದಂತೆ ಎಲ್ಲರಿಗೂ ವಾಸ್ತುಸ್ಥಿತಿಯನ್ನು ವಿವರಿಸಲಾಗುವುದು ಎಂದರು.
ನವಂಬರ್ ತಿಂಗಳವರೆಗೂ ಸರ್ಕಾರಿದಿಂದ ಪ್ರೋತ್ಸಾಹ ಧನ ಬಂದಿದ್ದು, 2024 ಡಿಸೆಂಬರ್ ನಿಂದ ಮಾರ್ಚ್ 2025 ವರೆಗೂ 43 ಕೋಟಿ ಬಾಕಿ ಹಣ ಬರಬೇಕಾಗಿದೆ ಎಂದು ರೇವಣ್ಣ ವಿವರಿಸಿದರು.