ಬೆಂಗಳೂರು,ಏ.3- ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಫ್ರೀಡಂ ಪಾರ್ಕ್‌ನಲ್ಲೇ ಅವರನ್ನು ವಶಕ್ಕೆ ತೆಗೆದುಕೊಂಡ ಪ್ರಸಂಗ ಜರುಗಿತು.
ಎರಡು ದಿನಗಳಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷದ ನಾಯಕರಾದ ಆರ್.ಆಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮತ್ತಿತರರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು.
ಇಂದು ಯಡಿಯೂರಪ್ಪ ನೇತೃತ್ವದಲ್ಲಿ ಸಿ ಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದರು. ರಸ್ತೆಯ ಎರಡೂ ಕಡೆ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಮೊದಲು ಮಹಿಳೆಯರು, ತಾಯಂದಿರು , ಮಹಿಳಾ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದಾಗ ಕೂಡಲೇ ಮಧ್ಯ ಪ್ರವೇಶ ಮಾಡಿದ ಪೊಲೀಸರು ಫ್ರೀಡಂಪಾರ್ಕ್ ಮುಂಭಾಗವೇ ಕಾರ್ಯಕರ್ತರನ್ನು ತಡೆದು ವಶಕ್ಕೆ ತೆಗೆದುಕೊಂಡರು.
ನಂತರ ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಮತ್ತಿತರರು ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆ ಪೊಲೀಸರು ತಕ್ಷಣವೇ ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು. ಈ ವೇಳೆ ಪೊಳೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕೆಲ ಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.
ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಾ ನಿರತರನ್ನು ಪೊಲೀಸರು ತಡೆಯಲು ಯತ್ನಿಸಿದಾಗ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಬ್ಯಾರಿಕೇಡ್ ಹತ್ತಿ ಪೊಲೀಸರು ಹಾಗೂ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುಡಿಯೂರಪ್ಪ, ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನಾನು ಸಿಎಂ ಹಾಗೂ ಡಿಸಿಎಂಗೆ ಹೇಳುತ್ತೇನೆ. ನಾವು ಕಟ್ಟುವ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದೀರಿ. ನೀರಾವರಿ ಯೋಜನೆಗಳು ಆಗುತ್ತಿಲ್ಲ. ಅವರು ನಮನ್ನು ಬಂಧಿಸಲಿ. ನಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೋ ಹೋಗಲಿ. ಇದೊಂದು ದರಿದ್ರ ಸರ್ಕಾರ. ಅವರು ನಮನ್ನು ಬಂಧಿಸಲಿ. ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.
ಈ ಕಾರ್ಯಕ್ರಮವನ್ನುನಿಮ ಜಿಲ್ಲೆಗಳಲ್ಲಿಯೂ ಮಾಡಿ ಎಂದು ಕರೆ ಕೊಟ್ಟ ಯಡಿಯೂರಪ್ಪ ಅವರು, ಜನರ ತೆರಿಗೆ ಲೂಟಿ ಮಾಡುತ್ತಿರುವ ಈ ಸರ್ಕಾರ, ಸಿದ್ಧರಾಮಯ್ಯರಿಗೆ ನಾನು ಒಂದು ಮಾತು ಹೇಳುತ್ತೇನೆ. ನೀವು ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಅಧಿಕಾರ ಬಿಟ್ಟು ತೊಲಗಿ. ನಾನು ಕೂಡ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಈ ಹೋರಾಟದ ಮೂಲಕ ಅಧಿಕಾರ ಬಿಟ್ಟು ಇಳಿಸುತ್ತೇವೆ ಎಂದು ಶಪಥ ಮಾಡಿದರು.
ಪ್ರತಿಭಟನೆಯ ವೇದಿಕೆಯಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿ, ಬಿಜೆಪಿಯಿಂದ ಆರಂಭವಾಗಿರುವ ಹೋರಾಟ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ. ಎರಡು ದಿನಗಳಿಂದ ಹೋರಾಟ ಆರಂಭವಾಗಿದೆ. ನಾಡಿನ ಜನರ ವಿಶ್ವಾಸ ಪಡೆದುಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಬಡವರ ಕಣ್ಣೀರು ಒರೆಸುವ ಕೆಲಸ ಮಾಡಬೇಕಾಗಿತ್ತು. ದುರಂತ ಎಂದರೆ ಸಿಎಂ ಸಿದ್ಧರಾಮಯ್ಯ, ಬಡವರು ರೈತರ ಪರವಾಗಿ ಕಣ್ಣೀರು ಒರೆಸಬೇಕಾಗಿತ್ತು ಎಂದು ಹೇಳಿದರು. ಸಿದ್ಧರಾಮಯ್ಯರ ಸಮಾಜವಾದಿ ಮುಖವಾಡ 20 ತಿಂಗಳಲ್ಲಿ ಕಳಚಿಬಿದ್ದಿದೆ. ನಾನು ಈ ವೇದಿಕೆಯ ಮೂಲಕ ಪ್ರಶ್ನಿಸುತ್ತೇನೆ. ಸಿದ್ಧರಾಮಯ್ಯನವರೇ, ಅಧಿಕಾರಕ್ಕೆ ಬರುವ ಮುನ್ನಾ ಇದ್ದ ಕಾಳಜಿ ಈಗ ಏಕೆ ಇಲ್ಲ?, ವಿಪಕ್ಷದಲ್ಲಿದ್ದಾಗ ಇದ್ದ ಕಾಳಜಿ ಈಗ್ಯಾಕೆ ಇಲ್ಲ?, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಅಹಿಂದ ಅಹಿಂದ ಎಂದು ಹೇಳುತ್ತಿದ್ದೀರಿ.
ಅಧಿಕಾರಕ್ಕೆ ಬಂದ ಮೇಲೆ ಯಾವ ಅಹಿಂದವೂ ಇಲ್ಲ. ನೇಕಾರರು, ಸವಿತಾ, ಈಡಿಗ, ಮೀನುಗಾರರ ಸಮಾಜ ಇರಬಹುದು. ಎಲ್ಲವನ್ನೂ ತುಳಿದಿದ್ದೀರಿ. ಹಿಂದುಳಿದ ಸಮಾಜವನ್ನು ನೋಡಲಿಲ್ಲ. ಕೇವಲ ಮುಸ್ಲಿಮರ ಹಿಂದೆ ಹೋಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆ ಹೇಗಿದೆ ಗೊತ್ತಾ?:
ಸಿಎಂ ಅಥವಾ ಸಚಿವರು ಜನರೇ ಬಡಿಗೆ ತೆಗೆದುಕೊಂಡು ಹೋಗುತ್ತಾರೆ. ಹಿಂದೆ ರಾಜ ಮಹಾರಾಜರು ಮಾರುವೇಷದಲ್ಲಿ ಸುತ್ತಾಡಿ, ಪ್ರಜೆಗಳು ಸುಭಿಕ್ಷವಾಗಿದ್ದಾರಾ? ಎಂದು ಸಂಚಾರ ಮಾಡುತ್ತಿದ್ದರು. ಅವರ ಆಗುಹೋಗುಗಳನ್ನು ನೋಡುತ್ತಿದ್ದರು. ನಾನು ಸಿಎಂ ಸಿದ್ಧರಾಮಯ್ಯರಿಗೆ ಹೇಳುತ್ತೇನೆ. ಎಸಿ ರೂಂನಲ್ಲಿ ಕೂರುವುದು ಬಿಡಿ. ನಿಮ ಕ್ಯಾಬಿನೆಟ್ ಸಚಿವರ ಜೊತೆಗೆ ರಾಜ್ಯ ಪ್ರವಾಸ ಮಾಡಿ. ಕೆಲವರು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ ಎಂದು ಕಿಡಿಕಾರಿದರು.
ಜನರ ಪರವಾಗಿ ಇದ್ದಿದ್ದರೆ, ಬೆಲೆ ಏರಿಕೆ ಮಾಡುತ್ತಿರಲಿಲ್ಲ. ಇಂದು ಅಧಿಕಾರದ ಅಮಲನ್ನು ಇಳಿಸುವ ಶಕ್ತಿ ಬಿಜೆಪಿಗೆ ಇದೆ. ಯಾವ ಮತದಾರರು ಸಿಎಂ ಗದ್ದುಗೆ ಕೊಟ್ಟಿದ್ದಾರೆ, ಅವರು ನಿಮನ್ನು ಕೆಳಗೆ ಇಳಿಸುತ್ತಾರೆ. ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ. ಏಪ್ರಿಲ್ 5 ರಂದು ಮತ್ತೆ ಹೋರಾಟ ಮಾಡುತ್ತೇವೆ. ಏಪ್ರಿಲ್ 7 ರಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪ್ರಾರಂಭ ಮಾಡುತ್ತೇವೆ. ಪ್ರತಿ ಜಿಲ್ಲೆಗೂ ಬರುತ್ತೇವೆ ಎಂದರು.
ನಾನು ಜಿಲ್ಲಾಧ್ಯಕ್ಷರಿಗೆ, ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ವಿಪಕ್ಷವಾಗಿ ಬಡವರ ಪರವಾಗಿ ದನಿಯಾಗೋಣ. ರೈತರ ಪರ ದನಿಯಾಗೋಣ. ಏಪ್ರಿಲ್ 7 ರಂದು ಎಲ್ಲಾ ಜಿಲ್ಲೆಗಳಿಗೂ ನಮ ಹೋರಾಟ ತಲುಪಲಿದೆ. ಮೊದಲು ಬೆಲೆ ಏರಿಕೆ ಹಿಂಪಡೆಯಬೇಕು. ಎರಡನೆಯದು ಮುಸ್ಲಿಮರಿಗೆ ಕೊಟ್ಟಿರುವ ಮೀಸಲಾತಿ ಹಿಂಪಡೆಯಬೇಕು. ಮೂರನೆಯದು ದಲಿತರಿಗೆ ಮೀಸಲಿಟ್ಟ ಹಣವನ್ನು ಅವರಿಗೆ ತಲುಪಿಸಬೇಕು ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನೀವು ಜನತಾ ನ್ಯಾಯಾಲಯದಲ್ಲಿ ನಿಂತಿದ್ದೀರಿ. ಇಲ್ಲಿ ಉತ್ತರಿಸುವಾಗ ಎಚ್ಚರ ಇರಲಿ.ಇಲ್ಲವಾದರೆ, ಜನತಾ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ. 5 ಗ್ಯಾರಂಟಿಗಳನ್ನು ಘೋಷಿಸಿ ಪೇಚಿಗೆ ಸಿಲುಕಿಸಿದ್ದೀರಿ. ಮುಡಾದಲ್ಲಿ ಲೋಕಾಯುಕ್ತರಿಂದ ಕ್ಲೀನ್‌ಚಿಟ್ ಪಡೆಯಲು ಮುಂದಾಗಿದ್ದೀರಿ. ಈಗ ಅದು ನಿಮ ಬುಡಕ್ಕೆ ಬಂದಿದೆ ಎಂದು ತಿರುಗೇಟು ನೀಡಿದರು.
ಎಸ್‌ಸಿಪಿ ಹಾಗೂ ಟಿಎಸ್‌ಪಿ ಹಣ ತಿಂದಿದ್ದೀರಿ. ನಿಮಗೆ ನಾಚಿಕೆ ಮಾನ ಮಾರ್ಯಾದೆ ಇದೆಯೇ?, ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡಲು ಮುಂದಾಗಿದ್ದೀರಿ. ಇದಕ್ಕೆ ಅವಕಾಶವೇ ಇಲ್ಲ. ಇದ್ಯಾವುದೂ ಸರಿಯಲ್ಲ ಎಂದು ತಲೆ ಆಡಿಸಿದ ಸಿಎಂ ಮುಖವಾಡ ಧರಿಸಿದ ವ್ಯಕ್ತಿ. ಡಿ.ಕೆ.ಶಿವಕುಮಾರ್ ಅವರೇ ನೀವೇನೋ ನಟ್ಟು, ಬೋಲ್ಟು ಟೈಟ್ ಮಾಡುತ್ತೇನೆ ಎಂದಿದ್ದೀರಿ. ಈಗ ನಿಮ ಪಕ್ಷದ ನಟ್ಟು, ಬೋಲ್ಟು ಟೈಟ್ ಮಾಡುತ್ತೀರೋ ಇಲ್ಲವೇ ಲೂಸು ಮಾಡ್ತೀರೋ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಸರ್ಕಾರದ ವಿರುದ್ಧ ಶೇ. 40 ಕಮಿಷನ್ ಆರೋಪ ಮಾಡಿ ಲೋಕಾಯುಕ್ತಕ್ಕೆ ಕೊಟ್ಟರು. ಲೋಕಾಯುಕ್ತ ಸಾಬೀತು ಮಾಡಲಿಲ್ಲ. ನಂತರ ನ್ಯಾ.ನಾಗಮೋಹನ ದಾಸ್ ಆಯೋಗಕ್ಕೆ ಕೊಟ್ರು. ನ್ಯಾ.ನಾಗಮೋಹನದಾಸ್ ಅವರೇನು ನಾಗಲೋಕದಿಂದ ಬಂದಿದ್ದಾರಾ?, ಸರ್ಕಾರ ಪ್ರತಿಯೊಂದಕ್ಕೂ ಅವರನ್ನೇ ನೇಮಕ ಮಾಡ್ತಿರೋದ್ಯಾಕೆ?, ಕ್ಲೀನ್‌ಚಿಟ್ ತಗೊಳ್ಳೋಕ್ಕಾ?, ನಮಗೆ ಅವರ ಮೇಲೆ ಗೌರವ ಇದೆ. ನಾವು ಗೌರವ ಕೊಡಬೇಕು ಅಂದರೆ ಅವರೂ ಸರಿ ದಾರಿಯಲ್ಲಿ ಇರಬೇಕು. ಲೋಕಾಯುಕ್ತದವರು ಪತ್ತೆಹಚ್ಚಲು ಆಗದ್ದನ್ನು ಇವ್ರು ಪತ್ತೆ ಮಾಡಿದ್ರಾ?, ಗುತ್ತಿಗೆದಾರರ ಮೂಲಕ ಇದೇ ಕಾಂಗ್ರೆಸ್ ಆಧಾರ ಇಲ್ಲದಿದ್ದರೂ ನಮ ಮೇಲೆ ಆರೋಪ ಮಾಡಿಸಿದ್ರು. ಅದನ್ನೇ ಬಂಡವಾಳ ಮಾಡಿ ಸರ್ಕಾರ ರಚಿಸಿದ್ರು. ಅದೇ ಗುತ್ತಿಗೆದಾರರು ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಶೇ. 60 ಕಮಿಷನ್ ಆರೋಪ ಮಾಡ್ತಿದ್ದಾರಲ್ಲ. ಇದಕ್ಕೆ ನ್ಯಾ.ನಾಗಮೋಹನ ದಾಸ್ ಏನ್ ಹೇಳ್ತಾರೆ ನೋಡಬೇಕು ಎಂದು ಟಾಂಗ್ ಕೊಟ್ಟರು.
ಮುಡಾ ಪ್ರಕರಣದಲ್ಲಿ ಇ.ಡಿ ತನಿಖೆಗೆ ಸಮತಿ ವಿಚಾರವಾಗಿ ಮಾತನಾಡಿ, ಲೋಕಾಯುಕ್ತ ಮೂಲಕ ಕ್ಲೀನ್‌ಚಿಟ್ ಪಡೆದ್ರು. ಹೈಕೋರ್ಟ್ ಡಬಲ್ ಬೆಂಚ್ ಈಗ ಇ.ಡಿ.ಗೆ ಅನುಮತಿ ಕೊಟ್ಟಿದೆ. ಹೈಕೋರ್ಟ್ ಆದೇಶಕ್ಕೆ ಸ್ವಾಗತ. ಮುಡಾ ಪ್ರಕರಣ ಸಿಬಿಐ ತನಿಖೆಗೆ ಸೂಕ್ತವಾದ ಪ್ರಕರಣ. ಈಗ ಇ.ಡಿ. ತನಿಖೆಗೆ ಅನುಮತಿ ಸಿಕ್ಕಿದೆ. ಇದರಲ್ಲಿ ಸಿಎಂ ಸಿಕ್ಕಿ ಬೀಳ್ತಾರೆ ಎಂದು ತಿಳಿಸಿದರು.