ಬೆಂಗಳೂರು,ಏ.3– ದೆಹಲಿ ಯಲ್ಲಿ ನಿನ್ನೆ ನಡೆದ ಕರ್ನಾಟಕ ಭವನ ಉದ್ಘಾಟನಾ ಕಾರ್ಯಕ್ರಮದ ಫೋಟೋವನ್ನು ಪೇಪರ್‌ನಲ್ಲಿ ನಾನು ನೋಡಿದೆ. ಅದರಲ್ಲಿ ನಾನು ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ಗೃಹಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಲ್ಲಿರುವ ಅಸಹನೆಯನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಭವನದ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ದೇ ನಾನು. ನಿನ್ನೆ ಅದರ ಉದ್ಘಾಟನೆಯಾಗಿದೆ. ನನ್ನನ್ನು ಯಾರೂ ಕರೆದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವರು ಸೇರಿದಂತೆ ಬಹುತೇಕ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನನಗೆ ಆಹ್ವಾನ ನೀಡದೇ ಇರುವ ಬಗ್ಗೆ ಹೆಚ್ಚು ಪ್ರಾಮುಖ್ಯ ನೀಡಬೇಕಿಲ್ಲ ಎಂದು ಹೇಳಿದರು.
ಹೊಸ ನೀರು ಬಂದಾಗ ಹಳೆ ನೀರು ಬದಲಾಗುವುದು ಸಹಜ. ಈ ಹಿಂದೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈಗ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಎಲ್ಲದಕ್ಕೂ ನನ್ನ ಅಭಿಪ್ರಾಯ ಕೇಳಬೇಕು ಎಂದು ಹೇಗೆ ಹೇಳಲು ಸಾಧ್ಯ? ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕಾಲಕಾಲಕ್ಕೆ ಚರ್ಚೆಗಳು ನಡೆಯುತ್ತಿವೆ. ನಾನು ಅಧ್ಯಕ್ಷನಾಗಿದ್ದಾಗಲೂ ಎರಡನೇ ಅವಧಿಗೆ ಮುಂದುವರೆಸಬಾರದು ಎಂಬ ಚರ್ಚೆಯಾಗಿತ್ತು. ಹೈಕಮಾಂಡ್ ನಾಯಕರು ಹಿರಿಯ ಕಾಂಗ್ರೆಸಿಗರ ಅಭಿಪ್ರಾಯ ಪಡೆದು ನನ್ನನ್ನೇ ಮುಂದುವರೆಸಿದರು. ಈಗಲೂ ಹಾಗೆಯೇ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಗಳಾಗುತ್ತವೆ. ಇದರಲ್ಲಿ ಏನೂ ವಿಶೇಷತೆ ಇಲ್ಲ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈಗ ಬೇಕೆಂದರೆ ಈಗಲೇ ನಾನು ಅವರ ಮನೆಗೆ ಹೋಗುತ್ತೇನೆ. ನಮಿಬ್ಬರ ಬಗ್ಗೆ ಅಂತಹ ಆತೀಯತೆ ಇದೆ ಎಂದರು.ರಾಜಕೀಯದಲ್ಲಿ ಸಣ್ಣಪುಟ್ಟ ಅಭಿಪ್ರಾಯ ಭೇದಗಳಿರುವುದು ಸಹಜ. ಅದನ್ನೇ ಭಿನ್ನಮತ ಎಂದು ಹೇಳುವುದು ಸರಿಯಲ್ಲ ಎಂದು ತಿಳಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹನಿಟ್ರ್ಯಾಪ್ ಹಾಗೂ ಅವರ ಪುತ್ರ ರಾಜೇಂದ್ರ ರಾಜಣ್ಣ ಅವರ ಕೊಲೆ ಬೆದರಿಕೆ ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ನಾನು ಹೇಳಿಕೆ ನೀಡುವುದು ಸರಿಯಲ್ಲ ಮತ್ತು ನನಗೆ ಮಾಹಿತಿಯೂ ಇಲ್ಲ. ತನಿಖೆ ನಡೆದು ವರದಿ ಬಂದ ಬಳಿಕ ಸೂಕ್ತ ಪ್ರತಿಕ್ರಿಯೆ ನೀಡುತ್ತೇನೆ. ರಾಜಣ್ಣ ಸದನದ ಹೊರಗೆ ಆರ್ಭಟಿಸುತ್ತಿದ್ದರು. ಸದನದ ಒಳಗೆ ಶಾಂತಚಿತ್ತದಿಂದಿರುತ್ತಿದ್ದರು. ಈ ಬಾರಿ ಸದನದ ಒಳಗೂ ಆರ್ಭಟಿಸಿದರು ಎಂಬ ನಿಗಾವಣೆ ಸರಿಯಿದೆ ಎಂದರು.
ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ. ರಾಜ್ಯಸರ್ಕಾರಕ್ಕೆ ಅಗತ್ಯ ತೆರಿಗೆ ಸಂಪನೂಲವನ್ನು ಹಂಚಿಕೆ ಮಾಡದೆ ಇರುವುದರಿಂದ ಸಹಜವಾಗಿಯೇ ಸ್ವಂತ ಸಂಪನೂಲವನ್ನು ಅವಲಂಬಿಸಬೇಕಾಗಿದೆ. ಹೀಗಾಗಿ ತೆರಿಗೆ ಹೆಚ್ಚಳ ಅನಿವಾರ್ಯ. ರಾಜ್ಯದ ಅಭಿವೃದ್ಧಿಗೆ ಹಣಕಾಸು ಹೊಂದಿಸಬೇಕಲ್ಲ ಎಂದು ಪರಮೇಶ್ವರ್ ಸಮರ್ಥಿಸಿಕೊಂಡರು.ಸದನದಲ್ಲಿ ಗಲಭೆ ಮಾಡಿದ ಬಿಜೆಪಿಯ 18 ಮಂದಿ ಶಾಸಕರನ್ನು ಅಮಾನತುಗೊಳಿಸುವ ಬಗ್ಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ. ಸ್ಪೀಕರ್‌ಗೂ ಮತ್ತು ಬಿಜೆಪಿ ಶಾಸಕರಿಗೂ ಸಂಬಂಧಪಟ್ಟ ವಿಚಾರ ಅದು ಎಂದು ಹೇಳಿದರು.