ನವದೆಹಲಿ,ಏ.3- ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.
ವಿಧಾನಪರಿಷತ್‌ನ ನಾಲ್ಕು ಸ್ಥಾನಗಳ ನೇಮಕಾತಿ, ಸಚಿವ ಸಂಪುಟ ಪುನರ್ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವಾರು ಮಹತ್ವದ ವಿಚಾರಗಳು ಈ ವೇಳೆ ಚರ್ಚೆಯಾಗಿವೆ.
ಕರ್ನಾಟಕ ಭವನದ ಹೊಸ ಕಟ್ಟಡ ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಜೊತೆಯಾಗಿಯೇ ದೆಹಲಿಗೆ ತೆರಳಿದ್ದರು.
ಆದರೆ ಇಂದು ಬೆಳಿಗ್ಗೆ ಸಿದ್ದರಾಮಯ್ಯ ತಾವು ಮಾತ್ರ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿದ್ದು, ಡಿ.ಕೆ.ಶಿವಕುಮಾರ್ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಸೇರಿದಂತೆ ಹಲವಾರು ವಿಚಾರಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ವಿವಿಧ ಬೆಲೆ ಏರಿಕೆಗಳ ವಿರುದ್ಧ ಪ್ರತಿಪಕ್ಷ ಬಿಜೆಪಿ ಬೀದಿಗಿಳಿದಿದೆ. ಈ ಹಂತದಲ್ಲಿ ಒಟ್ಟಾಗಿರಬೇಕಾದ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿಯವರು ಹೈಕಮಾಂಡ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವುದು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದರ ಮುನ್ಸೂಚನೆಯಾಗಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕೆಂದು ಪಟ್ಟು ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಣದ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಎಚ್.ಸಿ.ಮಹದೇವಪ್ಪ ಎಲ್ಲರೂ ದೆಹಲಿ ಪ್ರವಾಸದಲ್ಲಿದ್ದಾರೆ. ನಿನ್ನೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ಅದೇ ವೇದಿಕೆಯಲ್ಲಿ ಆರಂಭದಲ್ಲೇ ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿ ಸುಮಾರು ಒಂದು ಗಂಟೆ ಕಾಲ ಪರಸ್ಪರ ಮಾತುಕತೆ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು ಎಂಬ ಭಿನ್ನರ ಒತ್ತಡಕ್ಕೆ ಹೈಕಮಾಂಡ್ ಮಣೆ ಹಾಕುತ್ತಿಲ್ಲ. ಹೀಗಾಗಿ ಈ ಬಾರಿ ಪ್ರಬಲ ಲಾಬಿ ಆರಂಭಗೊಂಡಿದೆ. ಇತ್ತ ಡಿ.ಕೆ.ಶಿವಕುಮಾರ್ ಬಣ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆಯೂ ಪ್ರಸ್ತಾಪ ಮಾಡುತ್ತಿದೆ. ಸಿದ್ದರಾಮಯ್ಯನವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಬಹಳಷ್ಟು ನಾಯಕರು ಡಿ.ಕೆ.ಶಿವಕುಮಾರ್‌ರವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಬೇಕು ಎಂದು ವಕಾಲತ್ತು ವಹಿಸುತ್ತಿದ್ದಾರೆ.
ವಿಧಾನಪರಿಷತ್‌ನ ನೇಮಕಾತಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ತಾವು ಸಿದ್ಧಪಡಿಸಿದ್ದ ಸಂಭವನೀಯರ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ಗಾಂಧಿಯವರಿಗೆ ಸಲ್ಲಿಸಿದ್ದಾರೆ.ಡಿ.ಕೆ.ಶಿವಕುಮಾರ್ ಕೂಡ ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಖಾಲಿಯಿರುವ ಒಂದು ಸ್ಥಾನಕ್ಕೆ ಭರ್ತಿ ಮಾಡುವ ಕುರಿತಂತೆ ತೆರೆಮರೆಯ ಚರ್ಚೆಗಳು ನಡೆಯುತ್ತಿವೆ. ಹೈಕಮಾಂಡ್ ಜೊತೆ ಮುಖ್ಯಮಂತ್ರಿಗಳು ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.