ನವದೆಹಲಿ,ಏ.3- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿರುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು, ಮುಖ್ಯಮಂತ್ರಿ ಹಾಗೂ ಕೆಲ ಸಚಿವರು ದೆಹಲಿಗೆ ಬಂದಿದ್ದೇವೆ. ನಾನೂ ಕೂಡ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿದ್ದೆ. ಅದರಂತೆ ಸಿದ್ದರಾಮಯ್ಯನವರೂ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಕಚೇರಿ ನಮಗೆ ದೇವಸ್ಥಾನವಿದ್ದಂತೆ. ರಾಹುಲ್‌ಗಾಂಧಿ ರಾಷ್ಟ್ರೀಯ ನಾಯಕರು. ಅವರನ್ನು ಭೇಟಿ ಮಾಡಿರುವುದರಲ್ಲಿ ತಪ್ಪೇನೂ ಇಲ್ಲ. ನಮ ಪಕ್ಷದ ನಾಯಕರನ್ನು ಬಿಟ್ಟು ಮತ್ತಿನ್ಯಾರನ್ನೂ ಭೇಟಿ ಮಾಡಲು ಸಾಧ್ಯ? ಎಂದು ಪ್ರಶ್ನೆ ಮಾಡಿದರು.
ನಿನ್ನೆ ಕರ್ನಾಟಕ ಭವನ ಉದ್ಘಾಟನೆಯಾಗಿದೆ. ಅದು ಕರ್ನಾಟಕದಿಂದ ಬರುವ ರಾಜಕಾರಣಿ ಹಾಗೂ ಅಧಿಕಾರಿಗಳಿಗೂ ಉತ್ತಮ ವ್ಯವಸ್ಥೆ ಕಲ್ಪಿಸಲಿ, ಇಲ್ಲಿ ನಡೆಯುವ ಚರ್ಚೆಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿರಲಿ ಎಂದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಅದನ್ನು ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ಹೇಳಿದರು.
ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಶುಭ ಕೋರುತ್ತೇವೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬೆಲೆ ಹೆಚ್ಚಾಗುತ್ತಿದೆ. ಅದನ್ನು ಏಕೆ ಬಿಜೆಪಿಯವರು ಪ್ರತಿಭಟಿಸುತ್ತಿಲ್ಲ. ಈ ಹಿಂದೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಯೆಲ್ಲಾ ಹೆಚ್ಚಾದಾಗ ಏಕೆ ಪ್ರತಿಭಟನೆ ಮಾಡಲಿಲ್ಲ.
ಆಗಲೂ ಅವರು ಜನಪ್ರತಿನಿಧಿಗಳಾಗಿದ್ದರಲ್ಲಾ ಎಂದು ಲೇವಡಿ ಮಾಡಿದರು.
ಹಾಲು, ನೀರಿನ ಮೇಲಿನ ಬೆಲೆ ಹೆಚ್ಚಳ ಮಾಡುತ್ತಿದ್ದೇವೆ. ಅದರಿಂದ ರೈತರಿಗೆ ಅನುಕೂಲವಾಗುತ್ತಿದೆ. ರೈತರ ಪಕ್ಷ ಎಂದು ಕೇವಲ ಹಸಿರು ಟವಲ್ ಹಾಕಿಕೊಂಡರೆ ಸಾಲುವುದಿಲ್ಲ.
ಅವರಿಗೆ ಅನುಕೂಲ ಮಾಡಿಕೊಡಬೇಕು. ನಾವು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗ ರೈತರು ನಮಗೆ ಹೊಡೆಯಲಿಲ್ಲ. ಅದೇ ಪುಣ್ಯ. ಹಸುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಬೇರೆ ಬೇರೆ ದರಗಳು ಹೆಚ್ಚಾಗುತ್ತಿವೆ ಎಂದು ಜನ ಆಕ್ರೋಶಗೊಂಡಿದ್ದರು. ಹಸುಗಳನ್ನು ಮಾರಾಟ ಮಾಡುವ ಪರಿಸ್ಥಿತಿಯಲ್ಲಿದ್ದರು. ಹಾಲಿನ ದರ ಬೆಲೆ ಏರಿಕೆಯಿಂದ ಅವರಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯರ ನೇಮಕಾತಿಗೆ ಚರ್ಚೆಯಾಗುತ್ತಿದೆ. ಆದರೆ ಈಗಾಗಲೇ ನಿರ್ಧಾರವಾಗಿದೆ, ನಾಳೆ ಪ್ರಕಟವಾಗುತ್ತದೆ ಎಂಬುದು ಸರಿಯಲ್ಲ ಎಂದರು.
ಪ್ರತಿಭಟನೆ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಡಕು ಮೂಡಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೇಳಿದರು.