Saturday, April 5, 2025
Homeರಾಜ್ಯ"ಹಾಯ್‌ ಎಂದರೆ ಬಾಯ್‌ ಎನ್ನಬೇಕು ಅಷ್ಟೇ" : ಹನಿಟ್ರ್ಯಾಪ್‌ ಕುರಿತು ಸಚಿವ ಸತೀಶ್‌ ಜಾರಕಿಹೊಳಿ ಅಲರ್ಟ್

“ಹಾಯ್‌ ಎಂದರೆ ಬಾಯ್‌ ಎನ್ನಬೇಕು ಅಷ್ಟೇ” : ಹನಿಟ್ರ್ಯಾಪ್‌ ಕುರಿತು ಸಚಿವ ಸತೀಶ್‌ ಜಾರಕಿಹೊಳಿ ಅಲರ್ಟ್

Minister Satish Jarkiholi on full alert about honeytrap

ಬೆಂಗಳೂರು, ಏ.4- ಹನಿಟ್ರ್ಯಾಪ್‌ನಿಂದ ತಪ್ಪಿಸಿಕೊಳ್ಳಲು ನಮ ಹುಷಾರಿನಲ್ಲಿ ನಾವಿರಬೇಕು. ಯಾರಾದರೂ ಹಾಯ್‌ ಎಂದರೆ ಪ್ರತಿಯಾಗಿ ಹಾಯ್‌ ಎನ್ನಬಾರದು, ಬಾಯ್‌ ಹೇಳಿ ಬೇರೆ ಕಡೆ ಓಡಿ ಹೋಗಬೇಕಷ್ಟೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಷ್ಟೆ ಅಲ್ಲ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಸಚಿವ ಕೆ.ಎನ್‌.ರಾಜಣ್ಣ ಅವರು ಹೇಳಿಕೊಂಡಿರುವ ಪ್ರಕಾರ ಹಾಯ್‌ ಎಂದಾಗ ಬಾಯ್‌ ಹೇಳಿ ಹೋಗಿದ್ದಾರೆ. ಇಲ್ಲಿ ಯಾರಿಗೆ ಯಾರು ಮಿತ್ರರು, ಯಾರು ಶತ್ರುಗಳು ಎಂಬುದೇ ಗೊತ್ತಾಗುವುದಿಲ್ಲ. ಎಚ್ಚರಿಕೆಯಿಂದ ಇರಬೇಕಷ್ಟೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಕಾಂಗ್ರೆಸ್‌‍ ಹೈಕಮಾಂಡ್‌ ಯಾವ ಸೂತ್ರವನ್ನು ಅನುಸರಣೆ ಮಾಡುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ವರದಿಯಾಗಿರುವ ಪ್ರಕಾರ, ನನ್ನ ಹೆಸರು ಮತ್ತು ಈಶ್ವರ್‌ ಖಂಡ್ರೆ ಅವರ ಹೆಸರು ಪ್ರಸ್ತಾಪವಾಗಿದೆ. ಆದರೆ ಹಿರಿಯ ನಾಯಕರ ನಡುವೆ ಯಾವ ರೀತಿಯ ಚರ್ಚೆಯಾಗಿದೆ ಎಂಬುದು ಗೊತ್ತಿಲ್ಲ ಎಂದರು.

ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ದೆಹಲಿಯ ಕರ್ನಾಟಕ ಭವನ ಉದ್ಘಾಟನೆಗೆ ಕರೆಯದೇ ಇರುವ ಬಗ್ಗೆ ಸಂಪರ್ಕದ ಕೊರತೆಯಾಗಿರಬಹುದು. ಇದು ದೊಡ್ಡ ಸಮಸ್ಯೆಯಾಗುವುದಿಲ್ಲ. ಪರಮೇಶ್ವರ್‌ ಜೊತೆ ತಾವು ಈ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದರು.

ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುವುದು ಹಾಸ್ಯಾಸ್ಪದ. ಪೆಟ್ರೋಲ್‌, ಡೀಸೆಲ್‌, ಟೋಲ್‌ ಸೇರಿದಂತೆ ಹಲವಾರು ಬೆಲೆಗಳನ್ನು ಬಿಜೆಪಿ ಏರಿಕೆ ಮಾಡಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಬಾರಿ ತೈಲ ಬೆಲೆ ಏರಿಕೆಯಾಗಿದೆ? ಎಲ್ಲಾ ಬೆಲೆ ಏರಿಕೆಗೂ ಅದು ಮೂಲ ಕಾರಣ. ಬಿಜೆಪಿಯವರು ಈ ಬಗ್ಗೆ ಏಕೆ ಪ್ರತಿಭಟನೆ ನಡೆಸಿಲ್ಲ? ಎಂದು ಪ್ರಶ್ನಿಸಿದರು.

ಜನಸಂಖ್ಯೆ ಹೆಚ್ಚಾಗಿದೆ. ಅಭಿವೃದ್ಧಿಗೆ ಹಣಕಾಸು ಹೊಂದಿಸಲಿಕ್ಕಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಅವರು, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ವಿರೋಧಕ್ಕಾಗಿ ವಿರೋಧ ಮಾಡುವ ಬದಲು ವೈಜ್ಞಾನಿಕವಾಗಿ ವಿರೋಧ ಮಾಡಲಿ ಎಂದರು. ದೆಹಲಿಯಲ್ಲಿ ಕರ್ನಾಟಕ ಭವನ ನಿರ್ಮಾಣದಿಂದ ಹೆಚ್ಚುವರಿಯಾಗಿ 70 ಕೊಠಡಿಗಳು ಲಭ್ಯವಾಗಿವೆ. ಇನ್ನು ಮುಂದೆ ದೆಹಲಿಗೆ ತೆರಳಿದವರಿಗೆ ವಸತಿ ಸಮಸ್ಯೆ ತಗ್ಗಲಿದೆ ಎಂದು ಹೇಳಿದರು.

ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಹೆಚ್ಚಳದಿಂದ ಕರ್ನಾಟಕಕ್ಕೆ ಯಾವುದೇ ಆದಾಯ ಬರುವುದಿಲ್ಲ ಎಂದ ಅವರು, ದೆಹಲಿಗೆ ಈ ಬಾರಿ ತೆರಳಿದಾಗ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಾಗಲಿಲ್ಲ. ವಿಧಾನಪರಿಷತ್‌ ಸ್ಥಾನದ ಆಕಾಂಕ್ಷಿಗಳು ಹಾಗೂ ಇತರ ನೇಮಕಾತಿಗಳ ನಿರೀಕ್ಷೆಯಲ್ಲಿದ್ದವರು ಹೆಚ್ಚು ಜನರಿದ್ದರು. ಹೀಗಾಗಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡದೆ ವಾಪಸ್‌‍ ಬಂದಿದ್ದೇನೆ. ಸಚಿವ ಕೆ.ಎನ್‌.ರಾಜಣ್ಣ ಕೂಡ ಹೈಕಮಾಂಡ್‌ ಅನ್ನು ಭೇಟಿಯಾಗಿಲ್ಲ. ಮುಖ್ಯಮಂತ್ರಿ ಭೇಟಿಯಾಗಿದ್ದಾರೆ ಎಂದರು.

ಸಚಿವ ರಾಜಣ್ಣ ಅವರ ಹನಿಟ್ರಾಪ್‌ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವ ರೀತಿಯ ವರದಿ ಬರುತ್ತದೆ ಎಂದು ಕಾದು ನೋಡುತ್ತೇವೆ. ಹನಿಟ್ರ್ಯಾಪ್‌ ಪ್ರಕರಣಕ್ಕೆ ಅಂತ್ಯ ಹಾಡಲಾಗುವುದು. ಹನಿಟ್ರಾಪ್‌ ಎಂಬುದು ಬೋಗಸ್‌‍. ಯಾವ ಆರೋಪವೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಹಾಗೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿದೆ ಎಂಬುದನ್ನು ಹೈಕಮಾಂಡ್‌ ಮುಖ್ಯಮಂತ್ರಿಯವರಿಗೆ ತಿಳಿಸಿರುತ್ತದೆ. ಅವರ ಜೊತೆ ಚರ್ಚಿಸಿದ ಬಳಿಕ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.

ನೀರಾವರಿ ಯೋಜನೆಗಳಿಗೆ ತಮ ಕ್ಷೇತ್ರಕ್ಕೆ ಅನುದಾನಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಮತ್ತೊಮೆ ಸಚಿವರ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಅವರ ಬಳಿ ಇರುವ ಖಾತೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದರು.

RELATED ARTICLES

Latest News