Monday, April 7, 2025
Homeರಾಜ್ಯತೇಜೋವಧೆಗೆ ಕೀಳುಮಟ್ಟದ ರಾಜಕಾರಣ : ಕುಮಾರಸ್ವಾಮಿ ಕಿಡಿ

ತೇಜೋವಧೆಗೆ ಕೀಳುಮಟ್ಟದ ರಾಜಕಾರಣ : ಕುಮಾರಸ್ವಾಮಿ ಕಿಡಿ

HD Kuamraswamy attack on Congress govt

ಬೆಂಗಳೂರು,ಏ.5- ರಾಜ್ಯಸರ್ಕಾರ ತಮ ತೇಜೋವಧೆಗೆ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದು, ಸುಳ್ಳು, ಭೂ ಒತ್ತುವರಿ ಹಗರಣವನ್ನು ಮುಂದಿಟ್ಟು ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರ್ನಾಲ್ಕು ತಿಂಗಳಿನಿಂದಲೂ ತಾವು ಮಾಧ್ಯಮಗಳ ಜೊತೆ ಮಾತನಾಡಿಲ್ಲ. ಇನ್ನೂ ಮೂರು ತಿಂಗಳು ಸುಮನಿರಬೇಕೆಂದುಕೊಂಡಿದ್ದೆ. ಆದರೆ ಇವರ ಆರೋಪಗಳನ್ನು ನೋಡಿ ಮನಸ್ಸು ತಡೆಯುತ್ತಿಲ್ಲ ಎಂದು ಹೇಳಿದರು.

ಅಮೆರಿಕದ ಟ್ರಂಪ್‌ ಬಗ್ಗೆ ಸಂಸದರೊಬ್ಬರು ನಿರಂತರವಾಗಿ 25 ಗಂಟೆ ಕಾಲ ಮಾತನಾಡಿದ್ದರು ಎಂಬ ದಾಖಲೆ ಇದೆ. ನಾನು ದಿನದ 24 ಗಂಟೆ ಕಾಲ ನಾಳೆ ಬೆಳಿಗ್ಗೆಯವರೆಗೂ ಮಾತನಾಡುವ ಅವಕಾಶ ಇದೆ ಎಂದರು.

40 ವರ್ಷಗಳ ಹಿಂದೆ 47 ಎಕರೆ ಭೂಮಿಯನ್ನು ಸಿನಿಮಾ ನಿರ್ಮಾಪಕನಾಗಿದ್ದಾಗ ಖರೀದಿ ಮಾಡಿದ್ದೆ. ಅದರಲ್ಲಿ ಒತ್ತುವರಿಯಾಗಿದ್ದರೆ ದಾಖಲೆಗಳಲ್ಲಿ ಸರಿಪಡಿಸಿಕೊಳ್ಳಿ ಎಂದು ನಾನೇ ಹೇಳಿದ್ದೇನೆ. ಆದರೂ ದುರುದ್ದೇಶಪೂರ್ವಕವಾಗಿ ನನ್ನ ವರ್ಚಸ್ಸಿಗೆ ಧಕ್ಕೆ ಉಂಟುಮಾಡಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಸರ್ವೆ ಮಾಡುವ ಪ್ರಯತ್ನ ಮಾಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ನಾನಾ ರೀತಿಯ ಹಿಂಸೆ ನೀಡಿರುವುದು ಹೊಸತಲ್ಲ ಎಂದರು.

71 ಎಕರೆ ಗೋಮಾಳ ಒತ್ತುವರಿಯಾಗಿದೆ ಎಂದು ಸಾಮಾಜಿಕ ಪರಿವರ್ತನಾ ಸಂಸ್ಥೆ ಆರೋಪ ಮಾಡಿದೆ. ನನ್ನ ಸುಪರ್ದಿಯಲ್ಲಿರುವುದೇ 47 ಎಕರೆ. ಇನ್ನು 71 ಎಕರೆ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು. ರಾಜಕಾರಣದಲ್ಲಿ ನಾನು ಮಾಜಿ ಪ್ರಧಾನಿಯ ಮಗ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವನು. ಕೇವಲ 4 ಎಕರೆ ಒತ್ತುವರಿ ಮಾಡಿಕೊಳ್ಳಬೇಕೆ? ಎಂದು ಕಿಡಿಕಾರಿದರು.

ಜಮೀನು ಒತ್ತುವರಿಯನ್ನು ನೆಪಮಾಡಿ ನನ್ನ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರೆ ಅದು ನಡೆಯುವುದಿಲ್ಲ. ನನಗೆ ಅಕ್ರಮ ಮಾಡಿದರೆ ಅದನ್ನು ಸರಿಪಡಿಸಿಕೊಳ್ಳಲು ಕೆಲ ನಿಮಿಷಗಳು ಸಾಕಿತ್ತು. ಮುಡಾ ಹಗರಣದಲ್ಲಿ ಈಗ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಕರಣ ಮುಚ್ಚಿಹಾಕಲು ಏನೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ನಾನು ಎಂದೂ ಕೂಡ ಅಧಿಕಾರಿಗಳಿಗೆ ಈ ವಿಚಾರವಾಗಿ ಸೂಚನೆ ನೀಡಿಲ್ಲ ಎಂದರು.

ಕುಮಾರಸ್ವಾಮಿ ಮಹಾ ಅಪರಾಧ ಮಾಡಿದ್ದಾರೆ ಎಂದು ನಾಡಿನ ಜನರ ಮುಂದೆ ಬಿಂಬಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಈ ಸರ್ಕಾರದ ಪ್ರಯತ್ನಗಳು ನನಗೆ ಜ್ಞಾನೋದಯ ಮಾಡಿವೆ. ನನ್ನ ವಿರುದ್ಧ ಯಾವ ಮಟ್ಟಿನ ದ್ವೇಷ ಸಾಧಿಸುತ್ತಿದ್ದಾರೆ ಎಂದರೆ ನಾನು ಖರೀದಿಸಿದ ಜಮೀನಿನ ಮೂಲ ಮಾಲಿಕರಿಗೆ ನೋಟೀಸ್‌‍ ನೀಡಿ ಪೊಲೀಸರ ಮೂಲಕ ವಿಚಾರಣೆಗೊಳಪಡಿಸುತ್ತಿದ್ದಾರೆ. ಪೊಲೀಸರಿಗೂ, ಕಂದಾಯ ಇಲಾಖೆಗೂ ಏನು ಸಂಬಂಧ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಸಿವಿಲ್‌ ವಿಚಾರಗಳಿಗೆ ಪ್ರತ್ಯೇಕ ಕಾನೂನುಗಳಿವೆ. ಹೆಚ್ಚುವರಿ ಪೊಲೀಸ್‌‍ ಮುಖ್ಯಾಧಿಕಾರಿ ಮೂಲಕ ನೋಟೀಸ್‌‍ ಕೊಡಿಸಿ ವಿಚಾರಣೆ ನಡೆಸುವುದು ದೇಶದಲ್ಲಿ ಎಲ್ಲೂ ನೋಡಿಲ್ಲ. ಯಾವ ಎಸ್‌‍ಐಟಿ ತನಿಖೆ ಮಾಡುತ್ತಿದೆ ಎಂದು ಏಕವಚನದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು.ನನ್ನನ್ನು ಹೆದರಿಸುವ ಯಾವ ಪ್ರಯತ್ನಗಳೂ ಯಶಸ್ವಿಯಾಗಿಲ್ಲ. ಈ ಪ್ರಕರಣದಲ್ಲಿ ನಾನು ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ ಎಂದರು.

ಜಂತಕಲ್‌ ಮೈನಿ, ಸಾಯಿ ಟ್ರೇಡರ್‌ರ‍ಸ ಸೇರಿದಂತೆ ಹಲವಾರು ಕಂಪನಿಗಳ ಹೆಸರಿನಲ್ಲಿ ನನ್ನ ಹೆಸರು ಕೆಡಿಸುವ ಪ್ರಯತ್ನ ನಡೆದಿತ್ತು ಎಂದು ತಿಳಿಸಿದರು.ನಾನು ಬಿಬಿಎಂಪಿಯಲ್ಲಿ ಕಸ ತೆಗೆಯುತ್ತಿದ್ದೆ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ. ಹೌದು, ಬಿಎಸ್ಸಿ ಓದುವಾಗ ನಾಗರಿಕನಾಗಿ ಸುಧಾಮ್‌ನಗರ, ಹೊಂಬೆನಗರ, ಕೆಂಪೇಗೌಡ ನಗರ ಸೇರಿದಂತೆ 3 ವಾರ್ಡ್‌ಗಳಲ್ಲಿ ಕಸ ತೆಗೆಯುವ ಟೆಂಡರ್‌ ಪಡೆದಿದ್ದೆ.

ಹೊಟ್ಟೆಪಾಡಿಗೆ ನನ್ನ ಕೆಲಸ ನಾನು ಮಾಡುತ್ತಿದ್ದೆ. ಆಗ ವಿಧಾನಪರಿಷತ್‌ನಲ್ಲಿ ನಾಗೇಗೌಡರು ವಿಷಯ ಪ್ರಸ್ತಾಪಿಸಿ ದೇವೇಗೌಡರನ್ನು ಟೀಕಿಸಿದರು. ನನ್ನ ತಂದೆ ದೇವೇಗೌಡರು ಇನ್ನು ಮುಂದೆ ಸರ್ಕಾರದ ಗುತ್ತಿಗೆ ಪಡೆದು ಕಾಮಗಾರಿ ಮಾಡಬೇಡ ಎಂದು ಸೂಚನೆ ಮಾಡಿದರು. ಅದರಿಂದೀಚೆಗೆ ನಾನು ಗುತ್ತಿಗೆ ಕಾಮಗಾರಿಗಳನ್ನು ನಿಲ್ಲಿಸಿದೆ ಎಂದರು.

RELATED ARTICLES

Latest News