Tuesday, April 8, 2025
Homeರಾಜ್ಯಪೌರಕಾರ್ಮಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಪೌರಕಾರ್ಮಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

CM Siddaramaiah gives good news to civil servants

ಬೆಂಗಳೂರು,ಏ.7– ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಮಾಣಪತ್ರವನ್ನು ಮೇ 1ರ ಕಾರ್ಮಿಕ ದಿನಾಚರಣೆಯಂದು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರ ಪೈಕಿ ಈಗಾಗಲೇ ಕೆಲವರನ್ನು ಖಾಯಂಗೊಳಿಸಲಾಗಿದೆ.

ಬಾಕಿ ಉಳಿದವರನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರಿಗೆ ಖಾಯಮಾತಿ ಪ್ರಮಾಣಪತ್ರವನ್ನು ಕಾರ್ಮಿಕ ದಿನಾಚರಣೆಯಂದೇ ವಿತರಿಸಲಾಗುವುದು ಎಂದರು.

ಈ ಹಿಂದೆ ಪೌರಕಾರ್ಮಿಕರಿಗೆ ಕನಿಷ್ಟ ವೇತನವನ್ನು ಜಾರಿಗೊಳಿಸುವ ಮೂಲಕ 7 ಸಾವಿರ ರೂ.ಗಳಿದ್ದ ವೇತನವನ್ನು 17 ಸಾವಿರ ರೂ.ಗಳಿಗೆ ಹೆಚ್ಚಿಸಲಾಯಿತು. ಅನುಕಂಪದ ಆಧಾರದ ಮೇಲೆ ನೌಕರಿ ನೀಡುವುದನ್ನು ಪರಿಶೀಲಿಸಲಾಗುವುದು. ಖಾಯಂಗೊಂಡಿದ್ದ ಗುತ್ತಿಗೆದಾರರ ಕುಟುಂಬಕ್ಕೆ ಅನುಕಂಪದ ಆಧಾರದ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.

ತ್ಯಾಜ್ಯ ಸಾಗಾಣಿಕೆಯ ವಾಹನಗಳ ಚಾಲಕರು, ಸ್ವಚ್ಛಗಾರರನ್ನು ಗುತ್ತಿಗೆ ಬದಲಿಗೆ ನೇರ ವೇತನ ಪಾವತಿಗೆ ಒಳಪಡಿಸಲಾಗುವುದು. ಪೌರಕಾರ್ಮಿಕರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯದ ಹೆಲ್ತ್‌ಕಾರ್ಡ್‌ಗಳನ್ನು ವಿತರಿಸುವುದಾಗಿ ಹೇಳಿದರು.

ನಮ ಸರ್ಕಾರ ಸಮ ಸಮಾಜದ ನಿರ್ಮಾಣದ ಮೇಲೆ ನಂಬಿಕೆಯಿಟ್ಟಿದೆ. ಕೆಲಸದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಬಯಸುವುದಿಲ್ಲ. ನಮಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಒಂದೇ, ಪೌರ ಕಾರ್ಮಿಕರೂ ಒಂದೇ ಎಂದರು.

ನಾವುಗಳು ಸಾಮಾನ್ಯವಾಗಿ ಗುಡಿ-ಗೋಪುರ, ಮಠ ಮಂದಿರ, ಚರ್ಚ್‌ಗಳಿಗೆ ಪೂಜೆ ಮಾಡಲು ಹೋಗುತ್ತೇವೆ. ಪೌರ ಕಾರ್ಮಿಕರು ಸ್ವಚ್ಛತೆಯಲ್ಲೇ ದೇವರನ್ನು ಕಾಣುತ್ತಾರೆ. ನಿಮ ಕಾಯಕ ಅತ್ಯಂತ ಶ್ರೇಷ್ಠವಾದುದು. ನಿಮ ಎಲ್ಲಾ ಬೇಡಿಕೆಗಳಿಗೂ ಸರ್ಕಾರ ಸಹಾನುಭೂತಿಯಿಂದ ಸ್ಪಂದಿಸಲಿದೆ ಎಂದು ಹೇಳಿದರು.

ಸಿಂಧುತ್ವ ಪ್ರಮಾಣಪತ್ರ ನೀಡಿಕೆಯಲ್ಲಿರುವ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು. ಐಪಿಡಿ ಸಾಲಪ್ಪ ಅವರ ವರದಿಯನ್ನು ಅಧ್ಯಯನ ಮಾಡಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಒಳಚರಂಡಿ ವ್ಯವಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರನ್ನು ಖಾಯಂಗೊಳಿಸುವ ಕ್ರಮ ತೆಗೆದುಕೊಳ್ಳಲಾಗುವುದು. ಪೌರಕಾರ್ಮಿಕರ ಕೆಲಸವನ್ನು ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳಬೇಕು, ಅವರನ್ನು ಯಾರೂ ಅಮಾನವೀಯವಾಗಿ ನಡೆಸಿಕೊಳ್ಳಬಾರದು ಎಂದರು.

ಅಪ್ಪ ಹಾಕಿದ ಆಲಿದ ಮರ ಎಂದು ಪೌರಕಾರ್ಮಿಕರು ಜೋತು ಬೀಳಬಾರದು. ತಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು. ನಮ ಅಪ್ಪ-ಅಮ ವಿದ್ಯಾವಂತರಾಗಿರಲಿಲ್ಲ. ರಾಜಕೀಯದಲ್ಲೂ ಇರಲಿಲ್ಲ. ನಾನು ಕಾನೂನು ಪದವಿ ಪಡೆದ ಕಾರಣಕ್ಕಾಗಿಯೇ ರಾಜ್ಯದ ಮುಖ್ಯಮಂತ್ರಿಯಾಗಲು ಅವಕಾಶವಾಯಿತು. ಹೀಗಾಗಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು.

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಹೆಂಡತಿಯು ಗಂಡನಿಗೆ ಊಟ ಕೊಡಲು ಹೆದರುವಂತಹ ಕಾಲವಿತ್ತು. ಅಂತಹ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಪೌರಕಾರ್ಮಿಕರು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡರು. ಪೌರಕಾರ್ಮಿಕರು ಸಮಾಜದ ಆಧಾರಸ್ತಂಭರಲ್ಲಿ ಪ್ರಮುಖರು ಎಂದರು.

ಸಿಂಧುತ್ವ ಪ್ರಮಾಣಪತ್ರಕ್ಕಾಗಿ 12,695 ಅರ್ಜಿಗಳು ಬಾಕಿ ಇವೆ. ಇವುಗಳಲ್ಲಿ 6,110 ಮಂದಿ ಸಾಮಾನ್ಯ ವರ್ಗ, 6,500 ಮಂದಿ ಮೀಸಲಾತಿ ವರ್ಗದ ಸಿಬ್ಬಂದಿ ಇದ್ದಾರೆ. ಎಲ್ಲರಿಗೂ ಸಿಂಧುತ್ವ ನೀಡಿ ಮೇ 1 ರಂದು ಪ್ರಮಾಣಪತ್ರ ನೀಡಲಾಗುವುದು ಎಂದು ಹೇಳಿದರು.
ಬೆಂಗಳೂರು ನಗರದ ಪಾಲಿಕೆಯಲ್ಲಿ ಪೌರಕಾರ್ಮಿಕರ ಕಲ್ಯಾಣಕ್ಕಾಗಿ 64 ಕೋಟಿ ರೂ. ನಿಗದಿಪಡಿಸಲಾಗಿದ್ದು, ವೇತನ ಹಾಗೂ ಪಿಂಚಣಿ ಸೇರಿ 125 ಕೋಟಿ ರೂ. ಮೀಸಲಿಡಲಾಗಿದೆ ಎಂದು ಅಂಕಿಅಂಶಗಳನ್ನು ವಿವರಿಸಿದರು.

ಸಚಿವರಾದ ಕೆ.ಎಚ್‌.ಮುನಿಯಪ್ಪ, ಸಫಾಯಿ ಕರ್ಮಚಾರಿಗಳ ಮಹಾ ಸಂಘದ ರಾಜ್ಯಾಧ್ಯಕ್ಷ ನಾರಾಯಣ್‌, ಮಾಜಿ ಸಚಿವ ಎಚ್‌.ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News