ಬೆಂಗಳೂರು,ಏ.7– ನಡುರಸ್ತೆಯಲ್ಲೇ ಯುವಕನನ್ನು ಅಡ್ಡಗಟ್ಟಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 25 ರಿಂದ 30 ವರ್ಷದಂತೆ ಕಾಣುವ ಈ ಯುವಕನ ಹೆಸರು, ವಿಳಾಸ ಸಧ್ಯಕ್ಕೆ ತಿಳಿದು ಬಂದಿಲ್ಲ. ಬನಂಶಕರಿ 6ನೆ ಹಂತದ ರೆಸ್ಟೋರೆಂಟ್ ಸಮೀಪ ಈ ಯುವಕ ರಾತ್ರಿನಡೆದು ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಹಾಕಿ ಏಕಾಏಕಿ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ತಲೆ, ಕೈ-ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಂಭೀರಗಾಯಗೊಂಡು ಈತ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ಯುವಕ ಬಿಳಿ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಸುದ್ದಿ ತಿಳಿದು ಕೆಂಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ, ಮೃತದೇಹವನ್ನು ಆರ್‌ಆರ್‌ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕೊಲೆಯಾದ ಯುವಕ ಯಾರು ಎಂಬುವುದು ಗೊತ್ತಾದರೆ ಯಾರು, ಯಾವಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುವುದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.