Saturday, April 19, 2025
Homeಜಿಲ್ಲಾ ಸುದ್ದಿಗಳು | District Newsಕೋಲಾರ | Kolarಹಿಂದೂಪುರ-ಬೆಂಗಳೂರು ಪ್ಯಾಸೆಂಜರ್ ರೈಲಿನ 4 ಬೋಗಿಗಳ ಕಡಿತ, ಪ್ರಯಾಣಿಕರ ಗೋಳು ಕೇಳೋರಾರು..?

ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್ ರೈಲಿನ 4 ಬೋಗಿಗಳ ಕಡಿತ, ಪ್ರಯಾಣಿಕರ ಗೋಳು ಕೇಳೋರಾರು..?

Reduction of 4 coaches of Hindupur-Bengaluru passenger train

ಗೌರಿಬಿದನೂರು,ಏ.9- ಹಿಂದೂಪುರ-ಬೆಂಗಳೂರು ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲಿನ ಬೋಗಿಗಳನ್ನು ಕಡಿತ ಮಾಡಿರುವುದರಿಂದ ರೈಲ್ವೆ ಪ್ರಯಾಣಿಕರು ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗೌರಿಬಿದನೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಕಾರ್ಮಿಕರು, ವಿದ್ಯಾರ್ಥಿಗಳು, ಸರಕಾರಿ ಕರ್ತವ್ಯಕ್ಕೆ ತೆರಳುವವರು ಹಾಗೂ ರೈತರು ಪ್ರತಿನಿತ್ಯ ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್ ರೈಲನ್ನು ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಅವಲಂಬಿಸಿದ್ದಾರೆ. ಪ್ಯಾಸೆಂಜರ್ ರೈಲು ಗಾಡಿಯು 16 ಬೋಗಿಗಳನ್ನು ಹೊಂದಿದ್ದರೂ ಸಹ ಪ್ರಯಾಣಿಕರು ಸ್ಥಳವಕಾಶವಿಲ್ಲದೆ ಪರದಾಡುತ್ತಿದ್ದರು. ಆದರೆ ಇದೀಗ 4 ಬೋಗಿಗಳನ್ನು ಕಡಿತಗೊಳಿಸಿರುವುದರಿಂದ ಪ್ರಯಾಣಿಕರ ಪಾಡಂತೂ ಹೇಳ ತೀರದಾಗಿದೆ.

ನೂಕು ನುಗ್ಗಲು: ಹಿಂದೂಪುರದಿಂದ ಹೊರಡುವ ಪ್ಯಾಸೆಂಜರ್ ರೈಲು ವಿದುರಾಶ್ವತ್ಥ, ಗೌರಿಬಿದನೂರು, ಸೋಮೇಶ್ವರ, ತೊಂಡೇಬಾವಿ, ಒಡ್ಡರಹಳ್ಳಿ, ರಾಜಾನುಕುಂಟೆ, ಯಲಹಂಕ ಬೆಂಗಳೂರು ರೈಲ್ವೆ ನಿಲ್ದಾಣ ತಲುಪುತ್ತದೆ. ಈ ರೈಲು ಪ್ಯಾಸೆಂಜರ್ ರೈಲು ಆಗಿರುವುದರಿಂದ ಮಾರ್ಗಮಧ್ಯ ಬರುವ ಪ್ರತಿಯೊಂದು ಗ್ರಾಮಗಳ ನಿಲ್ದಾಣದಲ್ಲೂ ನಿಲುಗಡೆ ಮಾಡಿಕೊಂಡು ಆಯಾ ಭಾಗಗಳ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಸಾಗುತ್ತಿದೆ.

ವಿದ್ಯಾರ್ಥಿಗಳು ದೊಡ್ಡಬಳ್ಳಾಪುರ, ರಾಜಾನುಕುಂಟೆ, ಯಲಂಹಂಕ, ಬೆಂಗಳೂರು ಕಡೆಗಳ ಶಾಲಾ-ಕಾಲೇಜುಗಳಿಗೆ ನೂರಾರು ಮಂದಿ ಪ್ರತಿನಿತ್ಯ ತೆರಳುತ್ತಾರೆ. ಅದೇ ರೀತಿ ಕಾರ್ಮಿಕರು. ಸಾರ್ವಜನಿಕರು ಸಾವಿರಾರು ಮಂದಿ ಪ್ರಯಾಣಿಸುತ್ತಿದ್ದಾರೆ. ರೈಲಿನ ಬೋಗಿಗಳು ಕಡಿತಗೊಳಿಸಿರುವುದರಿಂದ ರೈಲಿನಲ್ಲಿ ನೂಕು ನುಗ್ಗಲು ಉಂಟಾಗಿ ಕನಿಷ್ಠ ನಿಲ್ಲಲೂ ಸಹ ಸ್ಥಳಾವಕಾಶವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳನ್ನು ಹೊತ್ತ ತಾಯಂದಿರು, ಯುವತಿಯರು, ವಯೋವೃದ್ಧರ ಪಾಡಂತೂ ಹೇಳತೀರದಾಗಿದೆ.

ಇರಿಸು-ಮುರಿಸು: ಒಂದು ಬೋಗಿಯಲ್ಲಿ ನೂರಾರು ಮಂದಿ ಪ್ರಯಾಣಿಸವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಲೇಜು ಯುವತಿಯರಿಗೆ ಮತ್ತು ಮಹಿಳೆಯರಿಗೆ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಲು ಒಂದು ರೀತಿಯ ಇರಿಸು ಮುರಿಸು ಆಗುತ್ತಿರುವುದಂತೂ ನಿಜ, ವಿಧಿಯಿಲ್ಲದೆ, ಸಕಾಲಕ್ಕೆ ಸಾರಿಗೆ ಬಸ್ ಗಳಿಲ್ಲದೆ ಇದ್ದರೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಬಹುತೇಕ ಪ್ರತಿನಿತ್ಯ ಪ್ರಯಾಣಿಸುವ ಪ್ರಯಾಣಿಕರು ಪ್ಯಾಸೆಂಜರ್ ರೈಲನ್ನೇ ಅವಲಂಬಿಸಿದ್ದಾರೆ.

ಹೈಟೆಕ್ ನಿಲ್ದಾಣ:
ನಗರದ ರೈಲ್ವೆ ನಿಲ್ದಾಣ ಹೈಟೆಕ್ ನಿಲ್ದಾಣವಾಗಿ ಮಾರ್ಪಾಟು ಆಗಿದ್ದರೂ ಸಹ ಮೂಲಭೂತ ಸೌಕಯ್ಯಗಳ ಕೊರತೆ ಎದ್ದು ಕಾಣುತ್ತಿದೆ, ಕೇವಲ ಟ್ರ್ಯಾಕ್ಗಳ ಸಂಖ್ಯೆ ಹೆಚ್ಚಳವಾಗಿರುವುದು ಬಿಟ್ಟರೆ ಹೊಸ ರೈಲುಗಳನ್ನು ಬಿಟ್ಟಿಲ್ಲ, ಕೆಲವು ಎಕ್ಸ್‌ಪ್ರೆಸ್ ರೈಲುಗಳು ಗೌರಿಬಿದನೂರು ನಿಲ್ದಾಣದಲ್ಲಿ ನಿಲುಗಡೆಯೂ ಸಹ ಇಲ್ಲವಾಗಿದೆ.

ರಾಜಧಾನಿ, ಕರ್ನಾಟಕ ಎಕ್ಸ್‌ಪ್ರೆಸ್, ಹಾಸನ್ಸೊಲಾಪುರ್, ಕೊಂಡವೀಡು ಮುಂತಾದ ಎಕ್ಸ್‌ ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಬೇಕೆಂಬ ಪ್ರಯಾಣಿಕರಿಂದ ದಶಕಗಳಿಂದಲೂ ಬೇಡಿಕೆಯಿದ್ದರೂ ಈವರೆಗೂ ಯಾವುದೇ ಬೇಡಿಕೆಗಳು ಈವರೆಗೂ ಈಡೇರಿಲ್ಲ, ಸಂಬಂದ ಸಂಸದರು, ಕೇಂದ್ರ ರೈಲ್ವೆ ರಾಜ್ಯ ಮಂತ್ರಿಗಳು ಸಹ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಯಾಣಿಕರು ಹಿಡಿಶಾಪವನ್ನು ಹಾಕುತ್ತಿದ್ದಾರೆ.

ಪ್ರಯಾಣಿಕರ ಹಿತದೃಷ್ಟಿಯಿಂದ ಹಾಗೂ ಸುಖಕರ ಪ್ರಯಾಣಕ್ಕಾಗಿ ಕಡಿತಗೊಳಿಸಿರುವ 4 ಬೋಗಿಗಳನ್ನು ಅಳವಡಿಸುವುದರ ಜೊತೆಗೆ ಮತ್ತೆರಡು ಬೋಗಿಗಳನ್ನು ಅಳವಡಿಸಲು ರೈಲ್ವೆ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

ಪ್ರತಿನಿತ್ಯ ಸಂಚರಿಸುವ ಪ್ಯಾಸೆಂಜರ್ ರೈಲು ಒಂದೇ ಕಡೆ ಸಂಚರಿಸುವುದಿಲ್ಲ, ಮೈಸೂರು, ತುಮಕೂರು,ಧರ್ಮಪುರಿ, ಮಾರಿಕುಪ್ಪಂ ಕಡೆಗಳಿಗೆ ಸಂಚಾರ ನಡೆಸುತ್ತಿದೆ, ಪ್ರತಿನಿತ್ಯ ಒಂದೊಂದು ಕಡೆಗಳಲ್ಲಿ ಸಂಚರಿಸುತ್ತದೆ. ಕೆಲವು ರೈಲುಗಳ ಬೋಗಿಗಳು ಸಂಚಾರಕ್ಕೆ ಯೋಗ್ಯವಲ್ಲದ ಕಾರಣ ರಿಪೇರಿಗೆ ಕಳುಹಿಸಲಾಗಿದ್ದು, ರಿಪೇರಿ ಆದ ಕೂಡಲೇ ಅಳವಡಿಸಲಾಗುವುದು ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಶಿವಕುಮಾ‌ರ್ ತಿಳಿಸಿದ್ದಾರೆ.

RELATED ARTICLES

Latest News