Saturday, April 19, 2025
Homeರಾಜ್ಯ"ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ಎಂದು ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿಯವರೇ ಬಯಲು ಮಾಡಿದ್ದಾರೆ"

“ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ಎಂದು ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿಯವರೇ ಬಯಲು ಮಾಡಿದ್ದಾರೆ”

CM's Economic Advisor Rayareddy has revealed that Karnataka is No. 1 in corruption in the country

ಬೆಂಗಳೂರು,ಎ.9- ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ಕರಾಳ ಭ್ರಷ್ಟತೆಯ ಮುಖವಾಡವನ್ನು ಬಯಲು ಮಾಡಿ ರಾಜ್ಯದ ಘನತೆ ಕುಗ್ಗಿದ ಸ್ವರೂಪವನ್ನು ಬಿಚ್ಚಿಟ್ಟಿದ್ದಾರೆ ಆ ಮೂಲಕ ರಾಷ್ಟ್ರ ಮಟ್ಟದಲ್ಲಿ ರಾಜ್ಯ ನಿಮ್ಮ ಆಡಳಿತದಲ್ಲಿ ಸಂಪೂರ್ಣ ಭ್ರಷ್ಟತೆಯ ಕಪ್ಪುಮಸಿ ಮೆತ್ತಿಕೊಂಡಿರುವುದನ್ನು ಅನಾವರಣ ಮಾಡಿ ಕರ್ನಾಟಕ ವಿಶ್ವಮಟ್ಟದಲ್ಲಿ ತಲೆತಗ್ಗಿಸುವ ಪರಿಸ್ಥಿತಿ ಇರುವುದನ್ನು ವಿವರಿಸಿದ್ದಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಪ್ರಹಾರ ನಡೆಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರ್ಕಾರದ ವಿರುದ್ದ ಸಾಲು ಸಾಲು ಪೋಸ್ಟ್ ಮಾಡಿರುವ ಅವರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭ್ರಷ್ಟಾಚಾರ, ಲೂಟಿಕೋರತನ ಕಾಂಗ್ರೆಸ್ ಸರ್ಕಾರದ ಅವಿಭಾಜ್ಯ ಅಂಗ ಎಂಬುದನ್ನು ಸ್ವತಃ ನಿಮ್ಮ ಆರ್ಥಿಕ ಸಲಹೆಗಾರರೂ ಆಗಿರುವ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆ. ಎಂದು ಕಿಡಿಕಾರಿದ್ದಾರೆ.

ಜನಪ್ರತಿನಿಧಿಗಳು ಹೇಗೆ ಇರುತ್ತಾರೊ ಅದರಂತೆಯೇ ಅಧಿಕಾರಿಗಳೂ ಇರುತ್ತಾರೆ. ಮುಖ್ಯಮಂತ್ರಿ ಏನೇ ಹೇಳಿದರೂ ಭ್ರಷ್ಟಾಚಾರದ ಕುರಿತು ನನ್ನ ವೈಯಕ್ತಿಕ ಅಭಿಪ್ರಾಯ ಇದೇ ಇರುತ್ತದೆ ಎಂದು ಹೇಳುವ ಮೂಲಕ ಯಥಾರಾಜ ತಥಾ ಮಂತ್ರಿಗಳು, ಅಧಿಕಾರಿಗಳು ಎಂಬ ಮಾತು ನಿಮ್ಮ ಆಡಳಿತದಲ್ಲಿ ಅಕ್ಷರಶಃ ಅನ್ವಯಿಸುತ್ತಿದೆ ಎನ್ನುವುದನ್ನು ಹೇಳುವ ಮೂಲಕ ವಾಸ್ತವ ಸ್ಥಿತಿಯ ಮೇಲೆ ನೇರವಾಗಿ ಬೆಳಕು ಚೆಲ್ಲಿದ್ದಾರೆ ಎಂದು ವಾಗಳಿ ನಡೆಸಿದ್ದಾರೆ.

ಹಿಂದಿನ ನಮ್ಮ ಮಾನ್ಯ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು 40% ಸರ್ಕಾರ ಎಂಬ ಸುಳ್ಳು ಅಪಪ್ರಚಾರಗಳನ್ನು ನಡೆಸಿ ರಾಜ್ಯದ ಜನತೆಯನ್ನು ದಿಕ್ಕುತಪ್ಪಿಸಿ ಜಗತ್ತಿನಲ್ಲಿ ನಾವೇ ಸತ್ಯವಂತರು ಎಂದು ಡಂಗುರ ಸಾರಿ ಅಧಿಕಾರಕ್ಕೆ ಬಂದ ನಿಮ್ಮ ನೈಜ ಮುಖವಾಡ ಇದೀಗ ಕಳಚಿ ಬಿದ್ದಿದೆ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

ಭ್ರಷ್ಟತೆಯ ಕೆನ್ನಾಲಿಗೆ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರು ಹಾಗೂ ಕಡು ಬಡವರ ದೈನಂದಿನ ಬದುಕಿನ ಸ್ಥಿತಿಯನ್ನು ಸುಡುತ್ತಿದೆ. ಇದಕ್ಕಾಗಿ ನಿಮ್ಮ ಸರ್ಕಾರದ ವಿರುದ್ಧ ಜನಬೆಂಬಲಿತ ಬಿಜೆಪಿ ಜನಾಕ್ರೋಶದ ಹೋರಾಟದ ಯಾತ್ರೆ ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನಡೆದಿದೆ. ನಿಮ್ಮ ಆಡಳಿತದಿಂದ ರಾಜ್ಯವನ್ನು ಮುಕ್ತಗೊಳಿಸದೇ ಕರುನಾಡಿಗೆ ಮುಕ್ತಿಯಿಲ್ಲ ಎಂಬ ನಿರ್ಧಾರಕ್ಕೆ ರಾಜ್ಯದ ಜನ ಬಂದಿದ್ದಾರೆ. ಸದ್ಯದಲ್ಲೇ ಜನಾಕ್ರೋಶದ ಬಿಸಿ ನಿಮ್ಮ ಸರ್ಕಾರವನ್ನು ಸುಟ್ಟು ಪಥನಗೊಳಿಸಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಸತ್ಯ ಒಪ್ಪಿಕೊಂಡ ಶಾಸಕ: ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಕೂಡಾ ಪೋಸ್ಟ್ ಮಾಡಿದ್ದು, ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ! ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಕಾಂಗ್ರೆಸ್ ಶಾಸಕ ಒಪ್ಪಿದ ಸತ್ಯ ಎಂದು ಕುಹಕವಾಡಿದ್ದಾರೆ.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಅವರು ಸ್ವತಃ ಒಪ್ಪಿಕೊಂಡಿರುವಂತೆ ಕರ್ನಾಟಕ ಈಗ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವರೇ ಈ ಹೇಳಿಕೆ ನಿಮ್ಮ ಅಥವಾ ನಿಮ್ಮ ಪಕ್ಷದ ರಾಜಕೀಯ ವಿರೋಧಿಗಳಿಂದ ಬಂದದ್ದು ಅಲ್ಲ. ನಿಮ್ಮದೇ ಪಕ್ಷದ ಹಿರಿಯ ನಾಯಕ ಒಪ್ಪಿಕೊಂಡಿರುವ ಸತ್ಯ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟು ಹಾಸುಹೊಕ್ಕಾಗಿದೆ ಮತ್ತು ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ನಿಮ್ಮ ಆರ್ಥಿಕ ಸಲಹೆಗಾರರ ಹೇಳಿಕೆ ಹಾಗು ರಾಜ್ಯ ಗುತ್ತಿಗೆದಾರರ ಸಂಘವು ಮಾಡಿರುವ 60% ಕಮಿಷನ್ ಆರೋಪವನ್ನು ತಾಳೆ ಮಾಡಿದಾಗ ಈ ಸರ್ಕಾರದ ಆಡಳಿತದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ ಎಂಬುದು ಅಂಗೈ ಹುಣ್ಣಿನಷ್ಟೆ ಸತ್ಯ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಮುಖ್ಯಮಂತ್ರಿಗಳೇ, ನಿಮ್ಮದೇ ಆರ್ಥಿಕ ಸಲಹೆಗಾರರ ಸತ್ಯ ವಚನದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ರಾಜ್ಯದಲ್ಲಿ ಹೆಚ್ಚಿದ ಹಾಗು ನಿಮ್ಮ ಸರ್ಕಾರದ ಪ್ರತಿನಿಧಿಯೇ ಒಪ್ಪಿದ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಜನರು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸುವ ಹೊಣೆ ನಿಮ್ಮದು! ಎಂದು ರವಿ ಆಗ್ರಹಿಸಿದ್ದಾರೆ.

RELATED ARTICLES

Latest News