Saturday, April 19, 2025
Homeರಾಜ್ಯಸಿಎಂ ಸಿದ್ದರಾಮಯ್ಯನವರ ವಿರುದ್ಧ 500 ಕೋಟಿ ರೂ. ಕಿಕ್‌ಬ್ಯಾಕ್‌ ಆರೋಪ, ಹೊಸ ಸಂಕಷ್ಟ ಶುರು

ಸಿಎಂ ಸಿದ್ದರಾಮಯ್ಯನವರ ವಿರುದ್ಧ 500 ಕೋಟಿ ರೂ. ಕಿಕ್‌ಬ್ಯಾಕ್‌ ಆರೋಪ, ಹೊಸ ಸಂಕಷ್ಟ ಶುರು

500 crore kickback Allegation against CM Siddaramaiah

ಬೆಂಗಳೂರು,ಏ.9- ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ಬೆನ್ನು ಹತ್ತಿರುವ ಬೆನ್ನಲ್ಲೇ ರಾಮ್‌ಗಢ್‌ ಮಿನರಲ್ಸ್ ಸೇರಿದಂತೆ 8 ಗಣಿ ಗುತ್ತಿಗೆಗಳ ನವೀಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 500 ಕೋಟಿ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ಆರೋಪಿಸಿ ವಿಚಾರಣೆಗೆ ಅನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ದೂರು ನೀಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಎಂಬುವರು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ರಾಜ್ಯಪಾಲರು ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕೆ? ಅಥವಾ ಅರ್ಜಿಯನ್ನು ತಿರಸ್ಕರಿಸಬೇಕೆ ಎಂಬುದರ ಕುರಿತು ಸ್ಪಷ್ಟ ತೀರ್ಮಾನವನ್ನು ಕೈಗೊಂಡಿಲ್ಲ.

ಈ ಸಂಬಂಧ ದೂರುದಾರರ ಜೊತೆ ರಾಜ್ಯಪಾಲರು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಆ ನಂತರ ದೂರಿನ ಮೇಲೆ ಸಹಿ ಮಾಡಿ ಕಾನೂನು ವಿಭಾಗದ ಅಭಿಪ್ರಾಯಕ್ಕೆ ಕಳುಹಿಸಿದ್ದಾರೆ. ಸಾಲಿಸಿಟರ್‌ ಜನರಲ್‌ ಬಳಿ ಚರ್ಚೆ ನಡೆಸಿ ತೀರ್ಮಾನ ಮಾಡುವುದಾಗಿ ರಾಜ್ಯಪಾಲರು ದೂರುದಾರರಿಗೆ ಭರವಸೆ ನೀಡಿದ್ದಾರೆ.

ಅಲ್ಲದೆ ದಾಖಲೆ ಪರಿಶೀಲಿಸಿ ವರದಿ ನೀಡುವಂತೆ ಸಾಲಿಸಿಟರ್‌ ಜನರಲ್‌ಗೆ ತಿಳಿಸಿದ್ದಾರೆ.
ರಾಮಗಢ್‌ ಮಿನರಲ್‌್ಸ ಸೇರಿದಂತೆ ಒಟ್ಟು 8 ಗಣಿ ಗುತ್ತಿಗೆಗಳ ನವೀಕರಣಕ್ಕೆ ಅಧಿಕಾರ ದುರುಪಯೋಗಪಡಿಸಿಕೊಂಡು ಸಿದ್ದರಾಮಯ್ಯ ಅವರು 500 ಕೋಟಿ ಕಿಕ್‌ಬ್ಯಾಕ್‌ ಪಡೆದಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 5 ಸಾವಿರ ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ರಾಮಮೂರ್ತಿ ಅವರು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಕಾಯ್ದೆ 1998ರ ಕಾಯ್ದೆ ಸೆಕ್ಷನ್‌ 7, 9, 11, 12 ಮತ್ತು 15 ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 59, 61, 42, 201, 227, 228, 229, 239, 314, 316/3, 318/1, 319, 322, 324/2, 324(3), 335, 336, 338 ಹಾಗೂ 340ರಡಿ ವಿಚಾರಣೆಗೆ ಪೂರ್ವಾನುಮತಿ ನೀಡಬೇಕೆಂದು ಕೋರಿದ್ದಾರೆ.

ಈ ಹಿಂದೆ 2014-15ರ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು 8 ಗಣಿ ಗುತ್ತಿಗೆಗಳಿಗೆ ತಾರ್ಕಿಕವಾಗಿ ನವೀಕರಣ ನೀಡಿದ್ದ ಅನುಮೋದನೆ ಹಾಗೂ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಸಿದ್ದರಾಮಯ್ಯ ಆಸ್ತಿ ಏರಿಕೆಯಾಗಿರುವುದರ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

2014ಕ್ಕೂ ಮುಂಚೆ ಮತ್ತು 2015ರ ನಂತರ ಆಸ್ತಿ ಋಣಪಟ್ಟಿಯನ್ನು ತಾಳೆ ಮಾಡಿ ಲೆಕ್ಕಾಚಾರ ಹಾಕಲಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ರಾಮಮೂರ್ತಿ ಗೌಡ ದೂರು ಕೊಟ್ಟಿದ್ದರು. ಆದರೆ ಸರಿಯಾದ ದಾಖಲೆಗಳನ್ನು ಸಲ್ಲಿಕೆ ಮಾಡದ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು.

ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ರಾಮಮೂರ್ತಿ ಗೌಡ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದಾರೆ. ಗಣಿ ಗುತ್ತಿಗೆ ನವೀಕರಣಕ್ಕೂ ಮುನ್ನ ಸಿದ್ದರಾಮಯ್ಯನವರ ಆದಾಯದಲ್ಲಿ ಏರಿಕೆಯಾಗಿರಲಿಲ್ಲ. 2023ರ ವಿಧಾನಸಭೆ ಚುನಾವಣೆ ವೇಳೆ ಅವರ ಕುಟುಂಬದ ಸದಸ್ಯರ ಸ್ಥಿರ-ಚರಾಸ್ತಿಗಳಲ್ಲೂ ಏರಿಕೆಯಾಗಿದೆ. ಏಕಾಏಕಿ ಆದಾಯ ಹೆಚ್ಚಳವಾಗಿರುವುದಕ್ಕೆ ಕಿಕ್‌ಬ್ಯಾಕ್‌ ಕಾರಣ. ಹೀಗಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೆಂದು ಕೋರಿದ್ದಾರೆ.

ಎಂಎಂಡಿಆರ್‌ ಕಾಯ್ದೆಯ ಸೆಕ್ಷನ್‌ 10ಎ 10ಎ(2)(ಬಿ), ಸೆಕ್ಷನ್‌ 10 ಎ(2)(ಸಿ) ಕಾಯ್ದೆ 2015ರ ಉಲ್ಲಂಘನೆಯಾಗಿದೆ. ನಿಯಮಗಳ ಪ್ರಕಾರ ಗಣಿಯನ್ನು ಹರಾಜು ಹಾಕಬೇಕೆ ಹೊರತು ನವೀಕರಣ ಮಾಡಲು ಅವಕಾಶವಿಲ್ಲ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಣಿಯನ್ನು ಹರಾಜು ಹಾಕಿದ್ದರೆ ಒಂದು ಗಣಿಯಿಂದ 500 ಕೋಟಿ ಆದಾಯ ಸರ್ಕಾರಕ್ಕೆ ಬರುತ್ತಿತ್ತು. ಒಟ್ಟು 8 ಗಣಿ ಕಂಪನಿಗಳನ್ನು ನವೀಕರಣ ಮಾಡಿದ್ದರಿಂದ 4 ಸಾವಿರ ಕೋಟಿ ಬೊಕ್ಕಸಕ್ಕೆ ನಷ್ಟವಾಗಿದೆ. ಅದೇ ರೀತಿ ಹರಾಜು ಪ್ರಕ್ರಿಯೆ ನಡೆದಿದ್ದರೆ ರಾಜಧನ ರೂಪದಲ್ಲಿ 600 ಕೋಟಿ ಸಂಗ್ರಹವಾಗುತ್ತಿತ್ತು. ಇಲ್ಲಿ ಮುಖ್ಯಮಂತ್ರಿಗಳೇ 500 ಕೋಟಿ ಕಿಕ್‌ಬ್ಯಾಕ್‌ ಪಡೆದಿರುವುದರಿಂದ ಬೊಕ್ಕಸಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಿದ್ದಾರೆ.

ತುಮಕೂರು ಮಿನರಲ್‌್ಸ (ಸೊಂದನೇಹಳ್ಳಿ) 161.86 ಎಕರೆ , ಎಸ್ಕೋ 46.55 2 ರಾಮ್‌ಗಢ್‌ (ಡಾಲ್ಕಿಯ) 828.6 ಎಕರೆ, ಕರ್ನಾಟಕ ಲಿಂಸ್ಕೋ 40.47 ಎಕರೆ, ಕೆಂಎಂಎಂಐ (ಕಾರಿಗನೂರು ಮಿನರಲ್‌್ಸ ) 498.57 ಎಕರೆ, (ಬಿಬಿಎಚ್‌) 259.52 ಎಕರೆ, ಎಂ ಉಪೇಂದ್ರನ್‌ ಮೈನ್‌್ಸ 112.3 ಎಕರೆ, ಜಯರಾಮ್‌ ಮಿನರಲ್‌್ಸಗೆ 29.35 ಎಕರೆ ಗಣಿ ಗುತ್ತಿಗೆ ನವೀಕರಿಸಲಾಗಿತ್ತು.

ಸಿದ್ದರಾಮಯ್ಯ ನೇತೃತ್ವದ ಮೊದಲ ಅವಧಿಯ ಕಾಂಗ್ರೆಸ್‌‍ ಸರ್ಕಾರವು, ಅವಧಿ ಮೀರಿದ ಒಂದು ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆಗೆ ಪೂರ್ಣ ನವೀಕರಣ ಅನುಮತಿ ನೀಡಿತ್ತು. ಮತ್ತು ಅವಧಿ ಮೀರಿದ ಏಳು ಪರವಾನಗಿಗಳಿಗೆ ತಾತ್ವಿಕ ನವೀಕರಣವನ್ನು ನೀಡಿತ್ತು.ಎಂಟು ಗುತ್ತಿಗೆಗಳಲ್ಲಿ, ಐದು ಗುತ್ತಿಗೆಗಳು ಎಂಎಂಡಿಆರ್‌ಎಗೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆ ಜಾರಿಗೆ ಬಂದ ಅದೇ ದಿನ (ಜನವರಿ 12, 2015) ತಾತ್ವಿಕ ನವೀಕರಣ ಮಾಡಲಾಗಿತ್ತು. ಇದರಲ್ಲಿಯೂ ಹೇಗೆ ಲೋಪಗಳು ನಡೆದಿವೆ ಎಂದು ದೂರು ಕೊಟ್ಟಿದ್ದಾರೆ.

ಎಂಟು ಗುತ್ತಿಗೆಗಳಲ್ಲಿ, ಐದು ಗುತ್ತಿಗೆಗಳು ಎಂಎಂಡಿಆರ್‌ಎಗೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆ ಜಾರಿಗೆ ಬಂದ ಅದೇ ದಿನ (ಜನವರಿ 12, 2015) ತಾತ್ವಿಕ ನವೀಕರಣ ಮಾಡಲಾಗಿತ್ತು. ಇದರಲ್ಲಿಯೂ ಹೇಗೆ ಲೋಪಗಳು ನಡೆದಿವೆ ಎಂದು ದಾಖಲೆ ಸಹಿತವಾಗಿ ರಾಮಮೂರ್ತಿಗೌಡ ಅವರು ರಾಜ್ಯಪಾಲರಿಗೆ ವಿವರಿಸಿದ್ದಾರೆ.

8 ಗಣಿ ಗುತ್ತಿಗೆಗಳಿಗೆ ನವೀಕರಣಕ್ಕೆ ತಾತ್ವಿಕ ಅನುಮೋದನೆ ಅಗತ್ಯವೇ ಇರಲಿಲ್ಲ. ಗಣಿ ಗುತ್ತಿಗೆ ನವೀಕರಣ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕಂಪನಿಗಳು ಸಕ್ಷಮ ಪ್ರಾಧಿಕಾರಗಳಾದ ಅರಣ್ಯ ಇಲಾಖೆ ಮತ್ತು ಐಬಿಎಂಗೆ ಮನವಿ ನೀಡಬೇಕಿತ್ತು.

ಕಬ್ಬಿಣದ ಅದಿರಿನ ಗಣಿಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್‌ ಹೇಳಿತ್ತು. ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ಜನವರಿ 12ರಂದು ತಿದ್ದುಪಡಿ ತಂದಿತ್ತು. ಗಣಿ ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಸಮಿತಿಯ ಉನ್ನತಾಧಿಕಾರ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದನ್ನು ಉಲ್ಲಂಘಿಸಿ 2,386 ಎಕರೆ ಭೂಮಿಯನ್ನು ಈ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಸಿದ್ದರಾಮಯ್ಯನವರ ವಿರುದ್ಧ ಗುರುತರ ಆರೋಪ ಮಾಡಲಾಗಿದೆ.

RELATED ARTICLES

Latest News