ಬೆಂಗಳೂರು, ಏ.10– ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಇವಿಎಂನಲ್ಲಿ ಮೋಸ ಮಾಡಿ ಬಿಜೆಪಿ ಗೆದ್ದಿದೆ ಎಂಬ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು, ಅನೇಕ ರಾಜ್ಯಗಳಲ್ಲಿ ಇಂಡಿ ಒಕ್ಕೂಟ ಇಂತಹ ಮೋಸ ಮಾಡಿಯೇ ಚುನಾವಣೆ ಗೆದ್ದಿದ್ದಾರೆ ಎಂಬುದು ನಿಮ್ಮ ಮಾತಿನ ಅರ್ಥವೇ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಎಂ. ಮಲ್ಲಿಕಾರ್ಜುನ ಖರ್ಗೆ ಅವರೇ ಇವಿಎಂ ಮಹಾ ಮೋಸ, ಮಹಾ ಮೋಸ ಎಂದು ವ್ಯರ್ಥಾಲಾಪ ಮಾಡುತ್ತಿರುವ ನೀವು ಹೇಳ ಹೊರಟಿರುವುದು ಏನು? ಎಂದು ವ್ಯಂಗ್ಯವಾಡಿದ್ದಾರೆ.
ನಿಮ್ಮ ಮಾತು ಕೇಳಿದಾಗ ಯದ್ಭಾವಂ ತದ್ಭವತಿ ಎಂಬ ನಾಣ್ಣುಡಿ ನೆನಪಾಗುತ್ತದೆ. ಅಂದ ಹಾಗೆ, ನಿಮ್ಮ ಅಳಿಯ ರಾಧಾಕೃಷ್ಣ, ಕಾಂಗ್ರೆಸ್ಸಿನ ನವ ಅಧಿನಾಯಕಿ ಪ್ರಿಯಾಂಕಾ ರಾಬರ್ಟ್ ವಾದ್ರಾ, ನಿಮ್ಮ ಅಧಿನಾಯಕ ರಾಹುಲ್ ಗಾಂಧಿ ಇವರೆಲ್ಲರೂ ಇವಿಎಂಮೋಸದಿಂದಲೇ ಗೆದ್ದಿದ್ದಾರೆ ಎಂದೇ? ತಮಿಳುನಾಡುನಲ್ಲಿ ಡಿಎಂಕೆ, ಕೇರಳದಲ್ಲಿ ಕಮ್ಯುನಿಸ್ಟರು, ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಕರ್ನಾಟಕದಲ್ಲಿ ಕಾಂಗ್ರೆಸ್ ಇವಿಎಂ ಕಾರಣದಿಂದ ಗೆದ್ದಿದ್ದಾರೆ ಎಂದು ತಾರಾಟೆಗೆ ತೆಗೆದುಕೊಂಡಿದ್ದಾರೆ.