ಹುಬ್ಬಳ್ಳಿ,ಏ.10- ಕಳೆದ ಆರು ತಿಂಗಳಲ್ಲಿ ಬಾರಿ ಡೀಸೆಲ್ ಬೆಲೆ ಏರಿಕೆ ಮಾಡಿರುವ ಸರ್ಕಾರದ ನಿರ್ಧಾರ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಏ.14ರ ರಾತ್ರಿಯಿಂದಲೇ ಆನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಲಾರಿ ಮಾಲೀಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಆರ್.ಷಣ್ಣುಗಪ್ಪ ತಿಳಿಸಿದರು.
ಅವರು ನಗರದಲ್ಲಿ ಮಾತನಾಡಿದ್ದು ರಾಜ್ಯ ಸರ್ಕಾರ ಅಕ್ಷರಶಃ ಲೂಟಿಗೆ ಇಳಿದಿದೆ. ರಾಜ್ಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಟೋಲ್ ಸಂಗ್ರಹಿಸುತ್ತಿದೆ. ಝಳಕಿ, ಅತ್ತಿಬೆಲೆ ಆರ್‌ಟಿಒ ಚೆಕ್ ಪೋಸ್ಟ್‌ಗಳಲ್ಲಿ ಕೋಟ್ಯಂತರ ಹಣವನ್ನು ಸರ್ಕಾರದ ಪರವಾಗಿ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಲಾರಿಗಳ ಸಂಚಾರದಿಂದ ಶೇ. 35ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಆದರೂ ಕೂಡಾ ಲಾರಿ ಮಾಲೀಕರ ಮತ್ತು ಚಾಲಕರ ಹಿತ ಕಾಪಾಡಲು ಮುಂದೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರಸ್ತೆಗಳಿಗೆ ಬಣ್ಣ ಬಳಿದು ಟೋಲ್ ಸಂಗ್ರಹವನ್ನು ಸ್ಥಳೀಯ ಪುಡಾರಿಗಳಿಗೆ ವಹಿಸಿದ್ದಾರೆ. 18 ರಸ್ತೆಗಳಿಗೆ ದರ ವಿಧಿಸಿದ್ದಾರೆ. ಅಲ್ಲದೇ ಕಮರ್ಷಿಯಲ್ ಟ್ಯಾಕ್ಸ್ ಚೆಕ್ ಪೋಸ್ಟ್‌ಗಳು 1028 ಕಡೆ ಇವೆ. ಗಡಿ ಠಾಣೆಗಳು ಲಾರಿ ಮಾಲೀಕರ ರಕ್ತ ಹೀರುತ್ತಿವೆ. ಈ ಅನ್ಯಾಯ, ದೌರ್ಜನ್ಯ ತಡೆಯಬೇಕಾದ ಸರ್ಕಾರ ಮತ್ತೆ ತೈಲ ಬೆಲೆ ಏರಿಸುವ ಮೂಲಕ ಬರೆ ಎಳೆದಿದೆ ಎಂದು ದೂರಿದರು.
ಅವಶ್ಯಕ ವಸ್ತುಗಳು ಸೇರಿದಂತೆ ಎಲ್ಲ ಬಗೆಯ ಲಾರಿ, ಗೂಡ್ಸ್ ಗಾಡಿಗಳು, ಗ್ಯಾಸ್ ಪೂರೈಕೆ ವಾಹನಗಳು 14ರಂದು ಮಧ್ಯರಾತ್ರಿಯಲ್ಲಿ ಎಲ್ಲಿ ಇರುತ್ತವೆಯೋ ಅಲ್ಲಿಂದಲೇ ನಿಂತು ಬಿಡುತ್ತಿವೆ. ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದರು.
ಸೆಸ್ ಸಂಗ್ರಹಿಸುವ ಮೂಲಕ ಲಾರಿ ಚಾಲಕರ ಕಲ್ಯಾಣಕ್ಕಾಗಿ 300 ಕೋಟಿ ರೂ. ಸಂಗ್ರಹ ಮಾಡಲಾಗಿದೆ.
ಅವರಿಗೆ ನಿವೃತ್ತಿ ವೇತನ ನೀಡುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಈ ನಿಟ್ಟಿನಲ್ಲಿ ನಿರಂತರ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು. ಲಾರಿ ಮಾಲೀಕರ ಸಮಸ್ಯೆಗಳು ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಜೆಟ್ ಪೂರ್ವ ಸಭೆಯಲ್ಲಿಯೇ ಗಮನಕ್ಕೆ ತಂದಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳಂತೂ ಯಾರ ಅಂಕೆಗೂ ಸಿಗದೇ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಮಾದರಿ ಅಗತ್ಯ:
ಲಾರಿ ಮಾಲೀಕರ ಹಿತ ಕಾಯಲು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎಲ್ಲ ಗಡಿ ಠಾಣೆಗಳು, ಸುಂಕ ವಸೂಲಿ ಕೇಂದ್ರಗಳನ್ನು ಬಂದ್ ಮಾಡಿಸಿದ್ದಾರೆ. ಅಲ್ಲದೇ ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ಗಳನ್ನು ರದ್ದು ಮಾಡಿದ್ದಾರೆ. ಅದೇ ಮಾದರಿಯನ್ನು ರಾಜ್ಯದಲ್ಲಿ ತರಬೇಕು ಎಂದು ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ಲಿಂಗರಾಜ, ಶಿವಣ್ಣ, ವಿಜಯ್ ಮಿಸ್ಕಿನ್, ಗಿರೀಶ ಮಲೆನಾಡು, ಸರ್ಫರಾಜ್, ಮುಕ್ತುಂ ಮದ್ರಾಸ್ ಇದ್ದರು.