ಬೆಂಗಳೂರು, ಏ.11- ಚಿಂತಾಮಣಿಯಲ್ಲಿ ನಿರ್ಮಾಣವಾಗಲಿರುವ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕ ಕಟ್ಟಡದ ಶಂಕುಸ್ಥಾಪನೆ ವೇಳೆ ಆಗಿದ್ದ ಶಿಷ್ಟಾಚಾರ ಉಲ್ಲಂಘನೆಯನ್ನು ಕೋಲಾರ ಸಂಸದ ಎಂ.ಮಲ್ಲೇಶ್ ಬಾಬು ಅವರು ಪ್ರಶ್ನಿಸಿದ್ದಕ್ಕೆ ಸಚಿವ ಡಾ. ಎಂ.ಸಿ.ಸುಧಾಕರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೊಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಸಂಬಂಧ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ (ಪಿಎಂ-ಆಯುಷ್ಮಾನ್ ಭಾರತ್ ಹೆಲ್ತ್ ಮಿಷನ್) ಯೋಜನೆ ಅಡಿ ಮಂಜೂರಾದ ಕಾಮಗಾರಿ ಉದ್ಘಾಟನೆ ವೇಳೆ ರಾಜ್ಯ ಕಾಂಗ್ರೆಸ್ ನಿಂದ ಗೂಂಡಾಗಿರಿ ನಡೆದಿದೆ ಎಂದು ಆಪಾದಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾರವರ ಫೋಟೋವನ್ನು ಹಾಕದೆ ರಾಜ್ಯ ಕಾಂಗ್ರೆನ್ ಸರ್ಕಾರ ಶಿಷ್ಟಾಚಾರದ ನಿಯಮ ಉಲ್ಲಂಘಿಸಿದೆ. ಕೇಂದ್ರ ಸರ್ಕಾರದ ಯೋಜನೆಯಡಿ ಅನುದಾನ ಪಡೆದು, ಕೇವಲ ಕಾಂಗ್ರೆಸ್ ಕಾರ್ಯಕ್ರಮ ಎಂದು ಬಿಂಬಿಸಿಕೊಂಡು ಕಾಂಗ್ರೆಸ್ ಜಾತ್ರೆ ನಡೆಸಿದ್ದಾರೆ. ಲಜ್ಜೆಗೆಟ್ಟ ಕಾಂಗ್ರೆಸ್ಸಿಗರು ಎಂದು ಜೆಡಿಎಸ್ ಟೀಕಿಸಿದೆ.