ಬೆಂಗಳೂರು,ಏ.15- ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ 1 ಆಗಿದೆ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರೇ ನೀಡಿದ ಹೇಳಿಕೆಯ ಮುಜುಗರದಿಂದ ರಾಜ್ಯಸರ್ಕಾರ ಇನ್ನೂ ಹೊರಬಂದಿಲ್ಲ. ಇದರ ನಡುವೆ ಆಡಳಿತ ಪಕ್ಷದ ಮತ್ತೊಬ್ಬ ಶಾಸಕ ಬಹಿರಂಗ ವೇದಿಕೆಯಲ್ಲಿ ಕೈ ಮುಗೀತೀನಿ, ಕಾಲಿಗೆ ಬೀಳ್ತಿನಿ, ಹಣ ವಸೂಲಿ ಮಾಡುವುದನ್ನು ನಿಲ್ಲಿಸಿ ಎಂದು ಬೇಡಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸಂತಪ್ಪ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಸ್ಫೋಟಕ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಇದರಿಂದ ಒಂದೆಡೆ ಸಂತೋಷ, ಮತ್ತೊಂದೆಡೆ ಕಣ್ಣೀರು ಬರುತ್ತದೆ ಎಂದಿದ್ದಾರೆ.
ಪೌರ ಕಾರ್ಮಿಕರ ನೇಮಕಾತಿಗೆ ಆದೇಶಗಳು ಬರುತ್ತಿದ್ದಂತೆ 2 ಲಕ್ಷ, 1 ಲಕ್ಷ, 5 ಲಕ್ಷ ಹಣ ವಸೂಲಿ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಎಂದಿಗೂ ಭ್ರಷ್ಟಾಚಾರವನ್ನು ಬೆಂಬಲಿಸುವುದಿಲ್ಲ. ನಿಮಗೆ ಕೈ ಮುಗಿಯುತ್ತೇನೆ, ಕಾಲಿಗೆ ಬೀಳುತ್ತೇನೆ. ದುಡ್ಡು ವಸೂಲಿ ಮಾಡುವುದನ್ನು ನಿಲ್ಲಿಸಿ ಎಂದು ವೇದಿಕೆಯಲ್ಲಿದ್ದ ಅಧಿಕಾರಿಗಳಿಗೆ ಕೈ ಮುಗಿದು ಬೇಡಿಕೊಂಡಿದ್ದಾರೆ.
ಪೌರ ಕಾರ್ಮಿಕರ ನೇಮಕಾತಿಯಲ್ಲಿ ವಸೂಲಿ ಮಾಡುತ್ತಿರುವುದು ಇದು ರಾಜ್ಯಾದ್ಯಂತ ನಡೆಯುತ್ತಿದೆ. ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿ, ಪಾಲಿಕೆಗಳಲ್ಲಿ ಖಾಯಂಗೊಳ್ಳುವವರಿಂದ ಹಣ ಪಡೆಯಲಾಗುತ್ತಿದೆ. ನಮ್ಮ ಬಡ ತಾಯಂದಿರಿಗೆ ಶೋಷಣೆಯಾಗಬಾರದು. ದಯವಿಟ್ಟು ಹಣ ವಸೂಲಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ 1 ಆಗಿದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದರು. ಇದು ವಿರೋಧ ಪಕ್ಷಕ್ಕೆ ಅಸ್ತ್ರ ಕೊಟ್ಟಂತಾಗಿತ್ತು. ತಕ್ಷಣ ಅವರು ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಭಾರೀ ಕಸರತ್ತು ನಡೆಸಿದರು.
ಅದರ ಮುಜುಗರವನ್ನು ಜೀರ್ಣಿಸಿಕೊಳ್ಳಲು ಸರ್ಕಾರಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಈ ನಡುವೆಯೇ ಕಾಂಗ್ರೆಸ್‌ನ ಶಾಸಕರೇ ಆಗಿರುವ ಬಸಂತಪ್ಪ ಅವರ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.
ಈ ಹಿಂದೆ ಬಸವರಾಜ ಬೊಮ್ಮಾಯಿಯವರು ಮುತ್ಯಖ್ಯಮಂತ್ರಿಯಾಗಿದ್ದಾಗ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆ ವೇಳೆ ಯಾರ ವಿರುದ್ಧವೂ ಭ್ರಷ್ಟಾಚಾರದ ಆರೋಪ ಕೇಳಿಬಂದಿರಲಿಲ್ಲ.
ಶುದ್ಧ ಆಡಳಿತ ಕೊಡುತ್ತೇವೆ ಎಂದು ಭಾರೀ ಪ್ರಚಾರ ಮಾಡಿದ್ದರು. ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನಲ್ಲಿ ಆಡಳಿತ ಪಕ್ಷದ ಶಾಸಕರೇ ಭ್ರಷ್ಟಾಚಾರದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಕೆಲವು ಅನುಮಾನಗಳನ್ನು ಹುಟ್ಟುಹಾಕಿದೆ.